Site icon PowerTV

72ರ ವಯಸ್ಸಿನಲ್ಲೂ ಕುಗ್ಗದ ಅಜ್ಜಿಯ ಯೋಗ ಉತ್ಸಾಹ

ಈ ಅಜ್ಜಿ ವಯಸ್ಸು ಭರ್ತಿ 72. ಆದರೆ, ಈ ಅಜ್ಜಿ ಯೋಗ ಮಾಡುವುದು ನೋಡಿದ್ರೆ ಯಾರೂ ಸಹ ಅಜ್ಜಿಗೆ ಇಷ್ಟು ವಯಸ್ಸು ಆಗಿದೆ ಎಂದು ನಂಬಲ್ಲ. ಯೋಗದಿಂದಾಗಿ ಈ ಇಳಿ ವಯಸ್ಸಿನಲ್ಲೂ ಅಜ್ಜಿ ಚೈತನ್ಯದ ಚಿಲುಮೆಯಂತೆ ಇದ್ದಾರೆ. ಅಂದಹಾಗೆ ಈ ವೃದ್ದೆ ಯೋಗದಲ್ಲಿ ಹಲವು ಆಸನಗಳನ್ನು ಮಾಡುತ್ತಾರೆ. ಹಾಗೆಂದು ಇವರು ಯಾವ ಯೋಗ ಗುರುವಿನ ಬಳಿ ಹೋಗಿ ಕಲಿತಲ್ಲ. ಅವರಿವರು ಯೋಗ ಮಾಡುವುದನ್ನೆ ನೋಡಿಯೇ ಕಲಿತಾದ್ದರಂತೆ. 72 ಇಳಿವಯಸ್ಸಿನಲ್ಲಿ 20ರ ಯುವತಿಯಂತೆ ಓಡಾಡುತ್ತಿರುವ ಈ ಅಜ್ಜಿಯ ಆರೋಗ್ಯದ ಗುಟ್ಟು ಯೋಗ.

ಉತ್ತಮ ಆರೋಗ್ಯಕ್ಕಾಗಿ ಯೋಗ ಒಂದು ಉತ್ತಮ ಪದ್ದತಿ ಎನ್ನುವುದಿದೆ. ಯೋಗವನ್ನು ರೋಗಕ್ಕೆ ಮದ್ದು ಅಂತಾನೂ ಕರೀತಾರೆ. ಪ್ರಾಚೀನ ಕಾಲದಿಂದಲೂ ಯೋಗಾಸನವೂ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಹೀಗಾಗಿಯೇ ಅನೇಕರು ಯೋಗವನ್ನು ತಮ್ಮ ಆರೋಗ್ಯದ ಗುಟ್ಟಾಗಿ ಮಾಡಿಕೊಂಡಿದ್ದು ಇದೆ. ಹಾಗೆಯೇ ಇಲ್ಲಿ ಯೋಗ ಮಾಡುತ್ತಿರುವ ಈ ಅಜ್ಜಿಯ ಹೆಸರು ದ್ರಾಕ್ಷಾಯಿಣಿ ವಡಗೆರ ಅಂತ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದವರು. ನೇಕಾರಿಕೆ ಉದ್ಯೋಗ ಮಾಡಿಕೊಂಡಿದ್ದಾರೆ.                                                                                                                                                ಯೋಗದಿಂದ ರೋಗ ದೂರ ಮಾಡಿಕೊಂಡ 72ರ ವೃದ್ಧೆ

ಈ ಅಜ್ಜಿಗೆ ಇದೀಗ ವಯಸ್ಸು ಭರ್ತಿ 72 ಎಂದರೆ ನಂಬಲೇಬೇಕು. ಈ ಇಳಿ ವಯಸ್ಸಿನಲ್ಲಿ ಹದಿಹರಿಯದವರು ನಾಚಿ ನೀರಾಗುವಂತೆ ಯೋಗಾಸನ ಮಾಡುತ್ತಾರೆ.ಕೆಲ ವರ್ಷಗಳ ಹಿಂದೆ ಕಾಲು ನೋವು ಕಾಣಿಸಿಕೊಂಡಿತ್ತು. ಆದರೆ, ಆಸ್ಪತ್ರೆಗೆ ಖರ್ಚು ಮಾಡಲು ಶಕ್ತಿ ಇರಲಿಲ್ಲ.ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು. ಅದಕ್ಕಾಗಿ ಅಜ್ಜಿ ಮೊರೆ ಹೋಗಿದ್ದು ಈ ಯೋಗಕ್ಕೆ.ಕಳೆದ ಎಂಟು ವರ್ಷಗಳಿಂದ ಯೋಗ ಮಾಡಲು ಆರಂಭಿಸಿರುವ ಅಜ್ಜಿ, ಹಲವು ಆಸನಗಳನ್ನು ಲೀಲಾಜಾಲವಾಗಿ ಮಾಡುತ್ತಾರೆ. ಅವರಿವರು ಮಾಡುವುದನ್ನು ನೋಡಿಯೇ ಯೋಗಾಭ್ಯಾಸ ರೂಢಿಸಿಕೊಂಡಿರುವ ಇವರು ಒಂದು ರೀತಿ ಏಕಲವ್ಯನಂತೆ ಅಂತನೂ ಹೇಳಬಹುದು.

ನಿತ್ಯ ಯೋಗ ಮಾಡುತ್ತಿರುವುದರಿಂದ ಇವರಿಗೆ ಯಾವುದೇ ಕಾಯಿಲೆಗಳು ಅಕ್ಕಪಕ್ಕ ಸುಳಿದಿಲ್ಲವಂತೆ. ತಮಗೆ ಯಾವುದೇ ರೋಗ, ರುಜಿನು ಬಂದಿಲ್ಲ ಅಂದ್ರೆ ಅದಕ್ಕೆ ಕಾರಣವೇ ಯೋಗ ಅನ್ನೋದು ಅಜ್ಜಿಯ ಬಲವಾದ ನಂಬಿಕೆ.

ಅಜ್ಜಿ ದ್ರಾಕ್ಷಾಯಿಣಿ ವಡಗೆರ ಅವರು ಒಬ್ಬ ಉತ್ತಮ ಯೋಗ ಪಟುವಿನಂತೆ ಆಸನಗಳನ್ನು ಪ್ರದರ್ಶಿಸುತ್ತಾರೆ. ತಾವು ಮಾಡುವ ಆಸನಗಳ ಹೆಸರು ಸಹ ಅಜ್ಜಿಗೆ ಅಷ್ಟೊಂದು ತಿಳಿದಿಲ್ಲ. ಆದರೆ, ಬೇರೆಯವರು ಮಾಡುವುದನ್ನು ನೋಡಿಯೇ ಕಲಿತಿದ್ದಾರೆ. ಸೂರ್ಯ ನಮಸ್ಕಾರ, ವಜ್ರಾಸನ, ಅರ್ಧಚಕ್ರಾಸನ, ಪರ್ವತಾಸನ, ಪವನಮುಕ್ತಾಸನ, ಪಶ್ಚಮೋತ್ತಾಸನ, ಶಿರಸಾಸನ ಮುಂತಾದ ಆಸನಗಳನ್ನು ಹಾಕುತ್ತಾರೆ. ಪ್ರತಿ ದಿನ ನಸುಕಿನ ಜಾವ ವಾಯು ವಿವಾರಕ್ಕೆ ತೆರಳುವ ಅಜ್ಜಿ ಬೆಳಗ್ಗೆ ಒಂದು ಗಂಟೆ ಯೋಗಾಭ್ಯಾಸಕ್ಕೆ ಮೀಸಲಿಟ್ಟಿದ್ದಾರೆ.

ಶಾಸ್ತ್ರೋಕ್ತವಾಗಿ ಯೋಗಾಭ್ಯಾಸ ಮಾಡಿಲ್ಲವಾದರೂ ಯಾರಾದರೂ ಆಸಕ್ತರು ಬಂದರೆ ಅವರಿಗೆ ತಮಗೆ ಗೊತ್ತಿರುವ ಕೆಲವು ಆಸನಗಳನ್ನು ಹೇಳಿಕೊಡಲು ಸಿದ್ದರಿದ್ದಾರೆ.ಅಜ್ಜಿಯ ಈ ಯೋಗಾಭ್ಯಾಸ ಸ್ಥಳೀಯರ ಮೆಚ್ಚುಗೆಗೂ ಪಾತ್ರವಾಗಿದೆ. ಅನೇಕರಿಗೆ ಯೋಗ ಮಾಡಬೇಕು ಎಂದು ಪ್ರೇರಣೆ ಆಗಿದ್ದಾರೆ. ಇವತ್ತು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನರು ಉಸಿರಾಟದಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ. ಕೆಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ, ಯೋಗದಿಂದ ಇಂತಹ ಅನೇಕ ಸಮಸ್ಯೆಗಳನ್ನು ದೂರ ಮಾಡಬಹುದು. ಇದಕ್ಕೆ ಅಜ್ಜಿ ನಮ್ಮೆಲ್ಲರಿಗೂ ಮಾದರಿ ಅಂತಾರೆ ಸ್ಥಳೀಯರು.

 

Exit mobile version