Site icon PowerTV

ಬಿಜೆಪಿಗೆ ಭರ್ಜರಿ ಜಯ : ಹುಬ್ಬಳ್ಳಿ-ಧಾರವಾಡ ಪಾಲಿಕೆ ಕೇಸರಿ ಪಾಲು

ಬೆಂಗಳೂರು : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ.

ಇಂದು ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಬಿಜೆಪಿಯ ವೀಣಾ ಬಾರದ್ವಾಡ್​ ಆಯ್ಕೆಯಾಗಿದ್ದಾರೆ. ಉಪ ಮೇಯರ್​ ಆಗಿ ಬಿಜೆಪಿಯ ಸತೀಶ್ ಹಾನಗಲ್ ಆಯ್ಕೆಯಾದರು. ಆ ಮೂಲಕ ತೀವ್ರ ಪೈಪೋಟಿಯಿಂದ ಕೂಡಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬಿದ್ದಿದೆ.

ಒಟ್ಟು 82 ಸದಸ್ಯರ ಬಲದೊಂದಿಗೆ 8 ಜನಪ್ರತಿನಿಧಿಗಳು, 4 ಶಾಸಕರು, ಒಬ್ಬ ಸಂಸದ, ಮೂವರು ಎಂಎಲ್​ಸಿ ಸೇರಿದಂತೆ ಒಟ್ಟು 90 ಮತಗಳಿದ್ದವು. ಈ ಪೈಕಿ ಬಿಜೆಪಿ ಅಭ್ಯರ್ಥಿ ಪರ 46 ಮತಗಳು ಚಲಾವಣೆಯಾಗಿದ್ದವು. ಕಾಂಗ್ರೆಸ್ ಅಭ್ಯರ್ಥಿ ಪರ 37 ಮತ ಚಲಾವಣೆಯಾಗಿದ್ದವು.

ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಬಿಜೆಪಿಯಿಂದ ವೀಣಾ ಬರದ್ವಾಡ್ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಸುವರ್ಣ ಅಖಾಡದಲ್ಲಿದ್ದರು. ಬಿಜೆಪಿಯ ವೀಣಾ ಬರದ್ವಾಡ್ ಅವರು ಒಟ್ಟು 46 ಮತಗಳೊಂದಿಗೆ ಮೇಯರ್​ ಆಗಿ ಆಯ್ಕೆಯಾದರು. 37 ಮತಗಳೊಂದಿಗೆ ಸುವರ್ಣ ಸೋಲು ಕಂಡರು. ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ್ ವೀಣಾ ಬರದ್ವಾಡ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ನೂತನ ಮೇಯರ್, ಉಪ ಮೇಯರ್ ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ತೆಂಗಿನಕಾಯಿ ಸೇರಿದಂತೆ ಹಲವು ನಾಯಕರು ಅಭಿನಂದನೆ ಸಲ್ಲಿಸಿದರು.

ಸದಸ್ಯರ ಬಲ : 82

ಬಹುಮತ : 46

ಬಿಜೆಪಿ ಸದಸ್ಯರು : 39

ಕಾಂಗ್ರೆಸ್ ಸದಸ್ಯರು : 33

ಪಕ್ಷೇತರರು : 6

AIMIM : 3

ಜೆಡಿಎಸ್ : 1

Exit mobile version