Site icon PowerTV

ನಿಮ್ಮ ಮೋದಿ ‘ಹೂ ಬದಲು ಕುಂಬಳಕಾಯಿ’ಯನ್ನೇ ಇಡುತ್ತಿದ್ದಾರೆ : ದಿನೇಶ್ ಗುಂಡೂರಾವ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಜನರ ಕಿವಿಗೆ ಹೂ ಇಡುವ ಬದಲು ಕುಂಬಳಕಾಯಿಯನ್ನೇ ಇಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಲೇವಡಿ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಟ್ವೀಟ್ ಮೂಲಕ ಅವರು ತಿರುಗೇಟು ನೀಡಿದ್ದಾರೆ.

ಬಿಜೆಪಿಯವರೇ, ಬೆಲೆ ಏರಿಕೆಯ ವಿಷಯದಲ್ಲಿ ಕಳೆದ 10 ವರ್ಷಗಳಿಂದ ಜನರ ಕಿವಿಗೆ ಹೂ ಇಡುವ ಬದಲು ನಿಮ್ಮ ಮೋದಿಯವರು ಕುಂಬಳಕಾಯಿಯನ್ನೇ ಇಡುತ್ತಿದ್ದಾರೆ. 65 ರೂಪಾಯಿ ಇದ್ದ ಪೆಟ್ರೋಲ್ 103 ಮಾಡಿದ್ದು ನಾವೇ? 50 ರೂಪಾಯಿ ಇದ್ದ ಡೀಸೆಲ್‌ 90 ಮಾಡಿದ್ದು ನಾವೇ? 400 ರೂಪಾಯಿ ಇದ್ದ ಸಿಲಿಂಡರ್ 1,150 ಮಾಡಿದ್ದು ನಾವೇ? 80 ರೂಪಾಯಿ ಇದ್ದ ಅಡುಗೆ ಎಣ್ಣೆ 170 ರೂ.ಗೆ ಏರಿಸಿದ್ದು ನಾವೇ? ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಜನಪ್ರಿಯತೆ ಬಹಳ ದಿನ ಉಳಿಯಲ್ಲ : ಬಸವರಾಜ ಬೊಮ್ಮಾಯಿ

ಮೋದಿ ಅಲ್ಲದೇ ಬೇರೆ ಯಾರು ಕಾರಣ?

ಇದು ನಿಮಗೆ ತಿಳಿದಿರಲಿ. ನಾವು ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ತಂದಿದ್ದೇ ನಿಮ್ಮ ಮೋದಿ ಸರ್ಕಾರದ ಬೆಲೆ ಏರಿಕೆಯಿಂದ ಸಾಮಾನ್ಯ ಜನರನ್ನು ಪಾರು ಮಾಡಲು‌. ಇಂದಿನ ಬೆಲೆ ಏರಿಕೆಗೆ ಮೋದಿಯವರಲ್ಲದೇ ಬೇರೆ ಯಾರು ಕಾರಣ? ಬಿಜೆಪಿಯವರಿಗೆ ಆತ್ಮಸಾಕ್ಷಿಯಿದ್ದರೆ ಬೆಲೆ ಏರಿಕೆಗೆ ಯಾರು ಕಾರಣ ಎಂದು ಪ್ರಶ್ನಿಸಿಕೊಳ್ಳಲಿ? ಎಂದು ಚಾಟಿ ಬೀಸಿದ್ದಾರೆ.

ಆಕಾಶಕ್ಕೆ ಉಗುಳುವ ಮೂರ್ಖತನವೇಕೆ?

ರಾಜ್ಯದ ಮಹಿಳೆಯರು ತಿರುಗಿಬಿದ್ದಿರುವುದು, ಸಿಟ್ಟಿಗೆದ್ದಿರುವುದು ನಮ್ಮ ಮೇಲಲ್ಲ. ಅವರ ಸಿಟ್ಟು ಸೆಡವು, ಹತಾಶೆಗಳು ನಿಮ್ಮ ಮೋದಿ ಸರ್ಕಾರದ ಕುರುಡು ಆರ್ಥಿಕ ನೀತಿಗಳ ಬಗ್ಗೆ. ಅದು ಈಗಾಗಲೇ ರಾಜ್ಯದ ಫಲಿತಾಂಶದಲ್ಲಿ ಸಾಬೀತಾಗಿದೆ‌‌. ಹೀಗಿರುವಾಗ ಆಕಾಶಕ್ಕೆ ಉಗುಳುವ ಮೂರ್ಖತನವೇಕೆ? ಎಂದು ಸಚಿವ ದಿನೇಶ್ ಗುಂಡೂರಾವ್ ಟಕ್ಕರ್ ಕೊಟ್ಟಿದ್ದಾರೆ.

Exit mobile version