Site icon PowerTV

ಕಾಂಗ್ರೆಸ್ ನಾಯಕರಿಗೆ ಶಾಮಿಯಾನ ಕೊರತೆಯಾದ್ರೆ ಹೇಳಲಿ ಹಾಕಿಸಿಕೊಡ್ತೀವಿ : ಬಿ.ವೈ ವಿಜಯೇಂದ್ರ

ಬೆಂಗಳೂರು : ಕೇಂದ್ರ ಸರ್ಕಾರ ಅಕ್ಕಿ ಪೂರೈಕೆಗೆ ತಡೆ ಹಿಡಿದಿರುವ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಶಾಸಕ ಬಿ.ವೈ ‌ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ನವರಿಗೆ ಶಾಮಿಯಾನ ಕೊರತೆಯಾದ್ರೆ ಹೇಳಲಿ ನಾವೇ ಹಾಕಿಸಿಕೊಡ್ತೀವಿ ಎಂದು ಕುಟುಕಿದ್ದಾರೆ.

ಮೊದಲು ಅವರು ಕೊಟ್ಟಿರುವವ ಐದು ಭರವಸೆಗಳನ್ನು ಷರತ್ತು ಇಲ್ಲದೆ ಈಡೇರಿಸಲಿ. ಆ ನಂತರ ಧಮ್ಮು, ತಾಕತ್ತು ಅಂತ ಬಳಸಿದ್ದಾರಲ್ಲ, ನಾವು ಏನು ಅಂತ ತೋರಿಸುತ್ತೇವೆ. ಜೂ.20ರಂದು ರಾಜ್ಯವ್ಯಾಪಿ ಕೇಂದ್ರದ ವಿರುದ್ಧ ಪ್ರತಿಭಟನೆ ಅಂತ ಕರೆ ಕೊಟ್ಟಿದ್ದಾರೆ. ಎಲ್ಲವನ್ನೂ ಕೇಂದ್ರದ ಅನುಮತಿ ಪಡೆದು ಮಾಡಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಧಮ್ಮು, ತಾಕತ್ತು ಇದ್ರೆ ಷರತ್ತುಗಳಿಲ್ಲದೆ ಗ್ಯಾರಂಟಿಗಳನ್ನ ಜಾರಿ ಮಾಡ್ಲಿ ; ಆರ್. ಅಶೋಕ್

ರಾಜೀನಾಮೆ ಕೊಟ್ಟು ಹೋಗಿ

ಕೇಂದ್ರದ ಕರ್ತವ್ಯ ಅಲ್ಲ,‌ ನಿಮ್ಮ‌ಕರ್ತವ್ಯ. ನಿಮ್ಮ ಕೈಯಲ್ಲಿ ಆಗದಿದ್ರೆ ರಾಜೀನಾಮೆ ಕೊಟ್ಟು ಹೋಗಿ. ಶಿವಕುಮಾರ್ ಅಣ್ಣ ನೀವು ಕೊಟ್ಟಿರೋ ಭರವಸೆ. ಯಾರೋ ಕೊಟ್ಟಿರೋ ಭರವಸೆ, ಇನ್ಯಾರನ್ನೋ ತೋರಿಸಬೇಡಿ. ನಿಮ್ಮ ಭರವಸೆ ವೈಫಲ್ಯ, ನೀವೇ ಉಳಿಸಿಕೊಳ್ಳಿ. ಕಾಂಗ್ರೆಸ್ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಬಿ.ವೈ ‌ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಜನ ಬಡಿಗೆ ಹಿಡಿದು ನಿಲ್ಲುತ್ತಾರೆ

ಕಾಂಗ್ರೆಸ್ ಪಕ್ಷದ ಧೋರಣೆ ನೋಡಿದರೆ ರಾಜ್ಯದ ಜನ ಬಡಿಗೆ ಹಿಡಿದು ನಿಲ್ಲುತ್ತಾರೆ. ಆಗ ಇವರ ಧಮ್ಮು, ತಾಕತ್ ಗೊತ್ತಾಗುತ್ತದೆ. ಬಹುಮತ ಕೊಟ್ಟಿದ್ದಾರೆ, ನಾವು ಮಾಡಿದ್ದೇ ಆಡಳಿತ ಅಂತ ಅಂದುಕೊಂಡಿದ್ದಾರೆ. ಗ್ಯಾರಂಟಿ ಘೋಷಣೆ ಜಾರಿ ಅಸಾಧ್ಯ ಎಂದು ಕಾಂಗ್ರೆಸ್ ನವರಿಗೆ ಅರ್ಥ ಆಗುತ್ತಿದೆ. ಕಮಿಷನ್ ಹೊಡೆಯಲು ನಮ್ಮ ರಾಜ್ಯದ ರೈತರಿಂದ ಅಕ್ಕಿ ಖರೀದಿ ಮಾಡದೇ ಹೊರ ರಾಜ್ಯಗಳಿಂದ ತರುತ್ತೇವೆ ಎನ್ನುತ್ತಿದ್ದಾರೆ. ಕಮಿಷನ್ ಹೊಡೆಯುವ ಹುನ್ನಾರ ಇದರ ಹಿಂದೆ ಸ್ಪಷ್ಟವಾಗಿದೆ ಎಂದು ಆರೋಪ ಮಾಡಿದ್ದಾರೆ.

Exit mobile version