Site icon PowerTV

ಅಡ್ಜಸ್ಟ್ ಮೆಂಟ್ ಇಲ್ಲದಿದ್ರೆ ಪರಮೇಶ್ವರ್, ಖರ್ಗೆ ಸೋತಿದ್ದೇಕೆ? : ಜೆಡಿಎಸ್ ಪ್ರಶ್ನೆ

ಬೆಂಗಳೂರು : ಅಡ್ಜಸ್ಟ್ ಮೆಂಟ್ ಇಲ್ಲದಿದ್ದರೆ ಕಳೆದ ಬಾರಿ ಡಾ.ಜಿ ಪರಮೇಶ್ವರ್ ಅವರು ಕೊರಟಗೆರೆಯಲ್ಲಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿಯಲ್ಲಿ ಸೋತಿದ್ದೇಕೆ? ಎಂದು ಜೆಡಿಎಸ್ ಕುಟುಕಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ದಲಿತೋದ್ಧಾರ, ಆಹಿಂದೋದ್ಧಾರ ಎನ್ನುವರು ಈ ಇಬ್ಬರನ್ನು ಸೋಲಿಸಲು ಹೂಡಿದ ತಂತ್ರಗಳ ಬಗ್ಗೆ, ಆಡಿದ ಸದಾರಮೆ ಆಟಗಳ ಬಗ್ಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಧೈರ್ಯ ಈ ಕಾಂಗ್ರೆಸ್ ಗೆ ಇದೆಯಾ? ಎಂದು ಟೀಕಿಸಿದೆ.

ಕಾಂಗ್ರೆಸ್ ಅಮಲಿನಲ್ಲಿ ತೇಲುತ್ತಿದೆ

135 ಸೀಟುಗಳ ಅಮಲಿನಲ್ಲಿ ತೇಲುತ್ತಿರುವ ಕಾಂಗ್ರೆಸ್ ಪಕ್ಷ, ‘ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿತು’  ಎಂಬಂತೆ ಹುಚ್ಚಾಟ ಆಡುತ್ತಿದೆ. ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಕಂಡ ಅತಿ ಅಪಮಾನಕರ ಸೋಲನ್ನು ಮರೆತು,ಈಗ ಜಗತ್ತನ್ನೇ ಗೆದ್ದೆ ಎಂದು ಗದೆ ತಿರುಗಿಸುತ್ತಿರುವುದು ವಿಕೃತಿಯ ಪರಮಾವಧಿ ಎಂದು ಛೇಡಿಸಿದೆ.

ಇದನ್ನೂ ಓದಿ : ಇಬ್ಬರೂ ಸೇರಿ ಸಹಿ ಹಾಕಿ ಕೊಟ್ರಿ, ಆಗ ಜ್ಞಾನ ಇರಲಿಲ್ವಾ? : ಆರ್. ಅಶೋಕ್

ಬಿಜೆಪಿ, ಕೈ ಕಾರ್ಯಕರ್ತರು ಮುಗ್ಧರಾ?

ಆಪರೇಶನ್ ಕಮಲ. ಇಬ್ಬರ ನಾಯಕರ ಜಂಟಿ ಆಪರೇಶನ್ ಎನ್ನುವುದು ಯಾರಿಗೆ ಗೊತ್ತಿಲ್ಲ? ಇದರ ಅಸಲಿ ಕಥೆ ಗೊತ್ತಿಲ್ಲದಷ್ಟು ಮುಗ್ಧರಾ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು?ಆ ಹೇಸಿಗೆಯಲ್ಲಿ ಬಿದ್ದು ಹೊರಳುತ್ತಿರುವ ಕಾಂಗ್ರೆಸ್ ಆ ಗಲೀಜನ್ನೆಲ್ಲ ಮುಖಕ್ಕೆ ಮೆತ್ತಿಕೊಂಡು ಇತರರಿಗೂ ಮೆತ್ತಲು ಹವಣಿಸುತ್ತಿದೆ. ಛೇ, ಅಸಹ್ಯ! ವಿಕೃತಿ ವಿನಾಶಕ್ಕೆ ದಾರಿ ಎಂದು ವಾಗ್ದಾಳಿ ನಡೆಸಿದೆ.

ಹಣದ ಹೊಳೆ ಹರಿಸಿದ್ದು ಯಾರು?

ಮಂಡ್ಯ ಜಿಲ್ಲೆ ಒಂದರಲ್ಲಿಯೇ ಪ್ರತಿ ಕ್ಷೇತ್ರಕ್ಕೆ ಕಮ್ಮಿ ಎಂದರೂ 10ರಿಂದ 20 ಕೋಟಿ ವ್ಯಯಿಸಿ ಮತ ವಿಭಜನೆ ಮಾಡಿದ್ದು ಯಾರು? ಒಬ್ಬರನ್ನು ಒಬ್ಬರು ಮೀರಿಸುವಂತೆ ಹಣದ ಹೊಳೆ ಹರಿಸಿದ್ದು ಯಾರು? ಪ್ರಾದೇಶಿಕ ಪಕ್ಷದ ಕತ್ತು ಕೊಯ್ಯಲು ನೀಚ, ನಿಕೃಷ್ಟ ರಾಜಕೀಯ ಮಾಡಿದ್ದು ಯಾರು? ಈಗ ನೀವೇ ಸತ್ಯ ಹೇಳುತ್ತಿದ್ದೀರಿ, ಸತ್ಯದ ಕತ್ತು ಕೊಯ್ಯುವುದು ಸಾಧ್ಯವೇ? ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.

Exit mobile version