Site icon PowerTV

ಶಿಕ್ಷಣ ಸಚಿವರ ತವರಲ್ಲೇ, ಶಿಕ್ಷಕರಿಗೆ ಕಾದು ಕಾದು ಮನೆಗೆ ತೆರಳಿದ ವಿದ್ಯಾರ್ಥಿಗಳು..!

ಶಿವಮೊಗ್ಗ : ಶಿಕ್ಷಕರು ಶಾಲೆಗೆ ಬಾರದೇ, ಶಿಕ್ಷಕರಿಗೆ ವಿದ್ಯಾರ್ಥಿಗಳು ಕಾದು ಕಾದು ಮನೆಗೆ ತೆರಳಿರುವ ಘಟನೆ ಶಿವಮೊಗ್ಗದಲ್ಲಿ ಅದರಲ್ಲೂ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ನಡೆದಿದೆ. 

ಶಾಲೆ ಆರಂಭವಾದ ಮೊದಲನೇ ದಿನವೇ ಈ ರೀತಿ ನಡೆದಿರುವುದು ಆಶ್ಚರ್ಯ ತಂದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿಯ ತುಮರಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಳೂರು ಗ್ರಾಮದ ಮಾರಲಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಮಕ್ಕಳು  ಬೇಸಿಗೆ ರಜೆಯನ್ನು ಮುಗಿಸಿ ಸಮವಸ್ತ್ರದೊಂದಿಗೆ ಶಾಲೆಗೆ ಬಂದಿದ್ದಾರೆ. ಶಾಲೆಯ ಪ್ರಥಮ ದಿನವಾದ ಇಂದು ಶಾಲೆಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಸ್ವಾಗತ ಕೋರಬೇಕಿತ್ತು. ಹೂ ಕೊಟ್ಟು, ಸಿಹಿ ಹಂಚಬೇಕಿತ್ತು. ಕನಿಷ್ಟ ಪಕ್ಷ ಶಿಕ್ಷಕರು ಶಾಲೆಗಾದರೂ ಬರಬೇಕಿತ್ತು. ಆದರೆ 12 ಗಂಟೆಯಾದರೂ ಶಿಕ್ಷಕರು ಬಾರದಿರುವುದು, ಆಶ್ಚರ್ಯ ತಂದಿದೆ.

ಮಕ್ಕಳನ್ನು ಶಾಲೆಗೆ ಕರೆ ತಂದಿದ್ದ ಪೋಷಕರು, ಬೇಸರಗೊಂಡು ಮಕ್ಕಳನ್ನು ತಮ್ಮ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಈ ಪ್ರಸಂಗ ಇದೇನಾ ಸರ್ಕಾರಿ ಶಾಲೆ ಅಂದ್ರೆ ಎಂಬಂತಾಗಿದೆ.  ಶಾಲೆಗೆ ಚಕ್ಕರ್ ಹೊಡೆದ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಇಂತಹ ಬೇಜವಾಬ್ದಾರಿ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಿದೆ.

Exit mobile version