Site icon PowerTV

‘ಗಂಡ-ಹೆಂಡತಿ ಮಧ್ಯೆ ನಡೆದ ಮಾತುಕತೆ’ ಹೊರಗೆ ಹೇಳೋಕೆ ಆಗಲ್ಲ : ಗುಟ್ಟು ಬಿಟ್ಟು ಕೊಡದ ಸವದಿ

ವಿಜಯಪುರ : ಗಂಡ ಹೆಂಡತಿ ನಡುವೆ ನಡೆದ ಮಾತುಕತೆ ಎಲ್ಲವನ್ನೂ ಹೊರಗೆ ಹೇಳೋಕೆ ಆಗಲ್ಲ ಎಂದು ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಲಕ್ಷ್ಮಣ ಸವದಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವಿಚಾರದ ಬಗ್ಗೆ  ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಸೌಜನ್ಯದ ಭೇಟಿ. ಡಿ.ಕೆ ಶಿವಕುಮಾರ್ ಪಕ್ಷದ ರಾಜ್ಯಾಧ್ಯಕ್ಷರು. ಬಿಡುವಿಲ್ಲದ ಕಾರಣ ಈವರೆಗೆ ಭೇಟಿ ಆಗೋಕೆ ಆಗಿರಲಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಡಿ.ಕೆ ಶಿವಕುಮಾರ್ ಅವರು ಮುಂದಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಮಾತನಾಡಿದ್ದಾರೆ. ಮಂತ್ರಿಯಾಗುವ ಬಯಕೆ ಎಲ್ಲರಿಗೂ ಇರುತ್ತೆ, ಅದು ಕಷ್ಟ ಸಾಧ್ಯ. ಕಾಂಗ್ರೆಸ್ 135 ಕ್ಷೇತ್ರದಲ್ಲಿ ಗೆದ್ದಿದೆ. ಹಳಬರೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬಂದಿದ್ದಾರೆ. ಹಳಬರಿಗೆ ಪ್ರಾತಿನಿಧ್ಯ ಕೊಡಬೇಕಾದ ಅನಿವಾರ್ಯ ಇರುತ್ತದೆ. ಎಲ್ಲರಿಗೂ ಮಂತ್ರಿ ಆಗೋಕೆ ಆಗಲ್ಲ. ಬಯಕೆ, ಅಪೇಕ್ಷೆ ಪಡೋದು ತಪ್ಪಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಖಾತೆ ಮರುಹಂಚಿಕೆ : ಎಂ.ಬಿ ಪಾಟೀಲ, ಪ್ರಿಯಾಂಕ್ ಖರ್ಗೆಗೆ ಹೆಚ್ಚುವರಿ ಖಾತೆ

ನಾವು ಇತ್ತೀಚಿಗೆ ಪಕ್ಷಕ್ಕೆ ಬಂದಿದ್ದೀವಿ

ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ. ಮೊದಲು ಶಾಸಕ, ಬಳಿಕ ಸಚಿವ, ಬಳಿಕ‌ ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಬೇಕು ಎನ್ನುತ್ತೇವೆ. ಮನುಷ್ಯನ ಕನಸುಗಳಿಗೆ ಮಿತಿ ಇಲ್ಲ‌‌. ಎಲ್ಲರಿಗೂ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ನಾವು ಇತ್ತೀಚಿಗೆ ಕಾಂಗ್ರೆಸ್‌ಗೆ ಬಂದಿದ್ದೀವಿ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ

ಕಾಂಗ್ರೆಸ್ ಪಕ್ಷ ಹೆಚ್ಚು ಸೀಟು ಗೆಲ್ಲಿಸಲು ನಮ್ಮದೆ ಆದ ಕಾರ್ಯ ಮಾಡಿದ್ದೇವೆ. ಎಲ್ಲವೂ ಪಕ್ಷದ ನಾಯಕರಿಗೆ ಗೊತ್ತಿದೆ. ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಡಿಕೆಶಿ ಭೇಟಿ ವೇಳೆ ನಡೆದ ಕೆಲ ವಿಚಾರ ಹೇಳೋಕೆ ಆಗಲ್ಲ. ಗಂಡ ಹೆಂಡತಿ ನಡುವೆ ನಡೆದ ಮಾತುಕತೆ ಎಲ್ಲವನ್ನೂ ಹೊರಗೆ ಹೇಳೋಕೆ ಆಗಲ್ಲ ಎಂದಿದ್ದಾರೆ. ಆ ಮೂಲಕ, ಡಿಕೆಶಿ ಭೇಟಿ ವೇಳೆ ಸಚಿವ ಸ್ಥಾನದ ಚರ್ಚೆಯು ನಡೆದಿರುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

Exit mobile version