Site icon PowerTV

ಮತ್ತೆ ‘ಹಾವೇರಿ ಗೋಲಿಬಾರ್’ ರೀತಿಯ ಘಟನೆ ರಿಪೀಟ್ ಆಗಬಾರದು : ಸಿದ್ದರಾಮಯ್ಯ

ಬೆಂಗಳೂರು : ಹಾವೇರಿ ಗೋಲಿಬಾರಿನಂತಹ ಘಟನೆ ಮತ್ತೆ ರಾಜ್ಯದಲ್ಲಿ ರಿಪೀಟ್ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ನಾನು ಕೇವಲ ಸೂಚನೆ ಕೊಡೋದಿಲ್ಲ. ಎಚ್ಚರಿಕೆ ಕೊಡ್ತಾ ಇದ್ದೇನೆ. ಸೂಚನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದಿದ್ದರೆ ಕಠಿಣ ಕ್ರಮಕ್ಕೆ ಸಿದ್ದರಾಗಿ. ಮುಂಗಾರು ಶುರುವಾಗ್ತಾ ಇದೆ. ಬೆಳೆ ರಕ್ಷಣೆಗೆ ಮುಂಜಾಗ್ರತಾ ಕ್ರಮ ವಹಿಸಿ ಎಂದು ತಾಕೀತು ಮಾಡಿದರು.

ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದ್ರೆ ಸಹಿಸಲ್ಲ

ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಆಗದು. ಫೀಲ್ಡ್‌ ಗೆ ಹೋಗಬೇಕು. ಕುಳಿತಲ್ಲೇ ಕುಳಿತು ಪರಿಣಾಮಕಾರಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದು. ಯಾವುದೇ ಕಾರಣಕ್ಕೆ ಕರ್ತವ್ಯ ಲೋಪ ಆಗಬಾರದು. ಬೇಜವಾಬ್ದಾರಿತನದಿಂದ ಅನಾಹುತಗಳಾದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು. ಅದಕ್ಕೇ ಮುಂಚಿತವಾಗಿ ಸಭೆ ಕರೆಯಲಾಗಿದೆ ಎಂದು ಖಡಕ್ ಸೂಚನೆ ನೀಡಿದರು.

ಸರ್ಕಾರಕ್ಕೆ ಹೊಸ ಇಮೇಜ್‌ ಕೊಡಬೇಕು

ಜನ ಸರ್ಕಾರದಿಂದ ಬದಲಾವಣೆ ಬಯಸಿದ್ದಾರೆ. ಸರ್ಕಾರಕ್ಕೆ ಹೊಸ ಇಮೇಜ್‌ ಕೊಡಲೇಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರ ಬಂದಿದೆ ಎಂಬ ಸಂದೇಶ ಹೋಗಬೇಕು. ಆಲಸ್ಯ ಬಿಟ್ಟು ಕೆಲಸ ಮಾಡಿ. ಬಹಳ ಜನ ಜಿಲ್ಲಾಧಿಕಾರಿಗಳು ತಾಲ್ಲೂಕುಗಳಿಗೆ ಭೇಟಿ ನೀಡಿರುವುದಿಲ್ಲ. ಇನ್ನುಮುಂದೆ ಇಂತಹುದಕ್ಕೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ಮಾಡಬೇಕು. ಲೋಪ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅನುದಾನದ ಅಗತ್ಯವಿದ್ದರೆ ಕೇಳಬೇಕು

ನಿಮ್ಮ ಬಳಿ ಅನುದಾನ ಲಭ್ಯವಿದೆ. ಅಗತ್ಯವಿದ್ದರೆ, ಕೇಳಬೇಕು. ಪರಿಹಾರ ಕ್ರಮ ಕೈಗೊಳ್ಳಲು ತೊಂದರೆ ಇಲ್ಲ. ಕೃಷಿ ಅಧಿಕಾರಿಗಳು ಬಿತ್ತನೆ ಚಟುವಟಿಕೆಗೆ ಅಗತ್ಯವಿರುವ ಬೀಜ, ಗೊಬ್ಬರ, ಕೀಟನಾಶಕಗಳನ್ನು ಒದಗಿಸಬೇಕು. ಹಾವೇರಿ ಗೋಲಿಬಾರಿನಂತಹ ಘಟನೆ ಮರುಕಳಿಸಬಾರದು ಎಂದರು.

ಶಾಲಾ ಕೊಠಡಿ ಶಿಥಿಲವಾಗಿದ್ರೆ ಕ್ರಮಕೈಗೊಳ್ಳಿ

ಮಳೆ ಬಂದು ಮರಗಳು ಬಿದ್ದುಹೋದರೆ, ಕೂಡಲೇ ತೆರವು ಗೊಳಿಸಬೇಕು. ವಿದ್ಯುಚ್ಚಕ್ತಿ ಕಂಬಗಳು ಬಿದ್ದು ಹೋದರೆ, ಟ್ರಾನ್‌ಫಾರ್ಮರ್‌ ಹಾಳಾಗಿದ್ದರೆ, ಸೇತುವೆಗಳು ಹಾಳಾಗಿದ್ದರೆ, ಶಾಲಾ ಕೊಠಡಿಗಳು ಶಿಥಿಲ ಆಗಿದ್ದರೆ ಈಗಲೇ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುನ್ನೆಚ್ಚರಿಕೆ ತೆಗೆದುಕೊಂಡರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜ್ಯದ ಕೆಲವು ಭಾಗದಲ್ಲಿ ಮಳೆ ಶುರುವಾಗಿದ್ದು, ಬಿತ್ತನೆ ಪ್ರಾರಂಭವಾಗಿದೆ. ಜೂನ್‌ ನಲ್ಲಿ ಮುಂಗಾರು ಪ್ರಾರಂಭವಾಗುತ್ತದೆ. ಏಪ್ರಿಲ್‌ ತಿಂಗಳಿನಲ್ಲಿಯೇ ಪ್ರಿ-ಮಾನ್ಸೂನ್‌ ಮಳೆ ಪ್ರಾರಂಭವಾಗಿದೆ. ಭಾರಿ ಮಳೆ, ಗಾಳಿಯಿಂದ ಮರಗಳು ಬಿದ್ದು ಹೋಗಿವೆ. ಸಿಡಿಲು, ಆಲಿಕಲ್ಲು ಮಳೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅನಾಹುತಗಳಾಗಿವೆ. ಇಂತಹ ಅನಾಹುತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದರು.

Exit mobile version