Site icon PowerTV

ಲೋಕಸಭಾ ಚುನಾವಣೆ ಹಿನ್ನೆಲೆ ‘ಮತ್ತೆ ರಾಜ್ಯ ಪ್ರವಾಸ’ಕ್ಕೆ ನಿರ್ಧಾರ : ಬಸವರಾಜ ಬೊಮ್ಮಾಯಿ

ಬೆಂಗಳೂರು : ಲೋಕಸಭಾ ಚುನಾವಣೆ ತಯಾರಿ ಬಗ್ಗೆ ತೀರ್ಮಾನ ಮಾಡಿದ್ದೇವೆ. ಈ ಸಂಬಂಧ ಮತ್ತೆ ರಾಜ್ಯ ಪ್ರವಾಸ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಿನ್ನೆ ಬಿಜೆಪಿ ಆತ್ಮಾವಲೋಕ ಸಭೆ ನಡೆಸಿದ್ದೇವೆ. ಎಲ್ಲ ಜಿಲ್ಲೆಗಳಿಂದ ವರದಿ ತರಿಸಿದ್ದೇವೆ. ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರೀತಿ ಚುನಾವಣೆ ನಡೆದಿದೆ. ಕೆಲವು ಕಡೆ ಲೋಪದೋಷಗಳಾಗಿದ್ದು, ಸರಿಪಡಿಸಲು ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ.

ಮುಂದೆ ಪಕ್ಷ ಪುನರ್ ಸಂಘಟನೆ, ಲೋಕಸಭೆ ಚುನಾವಣೆ ತಯಾರಿ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ನಾಯಕರು, ಪದಾಧಿಕಾರಿಗಳು ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಲಾಗಿದೆ. ಚುನಾವಣೆ ಸೋಲಿಗೆ ಹಲವು ಕಾರಣಗಳನ್ನು ಕಂಡುಕೊಂಡಿದ್ದೇವೆ. ಕೆಲವು ಕಡೆ ಅಭ್ಯರ್ಥಿಗಳು ಕಾರಣ, ಕೆಲವು ಕಡೆ ಸಂಘಟನೆ ಕಾರಣ ಎನ್ನುವುದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ‘ಸಿದ್ದು-ಡಿಕೆಶಿ’ಗೆ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ, ಬೊಮ್ಮಾಯಿ

ಗ್ಯಾರಂಟಿ ಬಗ್ಗೆ ಕಾಂಗ್ರೆಸ್ ಮೋಸ

ಉಚಿತ ಗ್ಯಾರಂಟಿ ಯೋಜನೆ ಬಗ್ಗೆಯೂ ಬಹಳ ಜನ ಹೇಳಿದ್ದಾರೆ. ಗ್ಯಾರಂಟಿ ಬಗ್ಗೆ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಕಾರ್ಯಕರ್ತರು ಜನರ ಬಳಿ ಹೋಗಿ ಹೇಳಿಲ್ಲ. ಅದರ ಬಗ್ಗೆ ಯಾವುದೋ ಬ್ಯಾಂಕ್ ನಿಂದ, ಕಂಪೆನಿಯಿಂದ ಬಂದವರ ರೀತಿ ಹೋಗಿ ಗ್ಯಾರಂಟಿ ಸ್ಕೀಂ ಬಗ್ಗೆ ಹೇಳಿದ್ದಾರೆ ಎಂದು ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಅಂತ ಕರೆ ಮಾಡಿ ಸುಳ್ಳು ಹೇಳಿದ್ದಾರೆ. ಯಾವ ಡಿಸಿ ಆಫೀಸ್ ಅಂದರೆ, ಡಿಸ್ಟ್ರಿಕ್ಟ್ ಕಾಂಗ್ರೆಸ್ ಆಫೀಸ್ ಅಂತ ಹೇಳಿದ್ದಾರೆ. ಈ ತರಹ ಮೋಸ ಮಾಡಿ ಗ್ಯಾರಂಟಿ ಸ್ಕೀಂ ಬಗ್ಗೆ ಹೇಳಿದ್ದಾರೆ. ಎಲ್ಲವೂ ಮುಂದೆ ಬೆಳಕಿಗೆ ಬರಲಿದೆ ಎಂದು ಬೊಮ್ಮಾಯಿ ಛೇಡಿಸಿದ್ದಾರೆ.

Exit mobile version