Site icon PowerTV

ಕರ್ನಾಟಕ ಬಳಿಕ ‘ಮಧ್ಯಪ್ರದೇಶದಲ್ಲೂ ಉಚಿತ ವಿದ್ಯುತ್’ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ 5 ಉಚಿತ ಗ್ಯಾರಂಟಿಗಳನ್ನು ನೀಡಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇದೀಗ ಮಧ್ಯ ಪ್ರದೇಶದಲ್ಲೂ ಅದೇ ಮಾದರಿ ಅನುಸರಿಸಲು ಮುಂದಾಗಿದೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್, ಇಂದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 100 ಯೂನಿಟ್ ವಿದ್ಯುತ್ ಉಚಿತ ಹಾಗೂ 100 ರಿಂದ 200 ಯೂನಿಟ್ ಬಳಕೆದಾರರಿಗೆ ಅರ್ಧ ಶುಲ್ಕ ಮಾತ್ರ ವಿಧಿಸಲಾಗುತ್ತದೆ ಎಂದು ಟ್ವಿಟ್ ಮೂಲಕ ಘೋಷಣೆ ಮಾಡಿದ್ದಾರೆ.

ಎಎಪಿ (ಆಮ್ ಆದ್ಮಿ ಪಾರ್ಟಿ) ಪಕ್ಷ ಉಚಿತ ವಿದ್ಯುತ್ ನೀಡುವ ಯೋಜನೆ ಘೋಷಣೆ ಮಾಡಿ ದೆಹಲಿ ಮತ್ತು ಪಂಜಾಬ್ ನಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ನೀಡಿ 136 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ : ಕಾಂಗ್ರೆಸ್ ಬಂದಾಯ್ತು, ‘ನಾವ್ಯಾಕೆ ಕರೆಂಟ್ ಬಿಲ್ ಕಟ್ಟಬೇಕು’

ಇನ್ನೂ, ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇದೀಗ ಕಮಲನಾಥ್ ಸಹ ಉಚಿತ ವಿದ್ಯುತ್ ನೀಡುವ ಭರವಸೆ ಘೋಷಣೆ ಮಾಡಿದ್ದಾರೆ.

ಉಚಿತ ಗ್ಯಾರಂಟಿ ಬಗ್ಗೆ ಬಿಜೆಪಿ ಟೀಕೆ

ಕಾಂಗ್ರೆಸ್ ಪಕ್ಷದ ಉಚಿತ ವಿದ್ಯುತ್ ಭರವಸೆಯನ್ನು ಆಡಳಿತಾರೂಢ ಬಿಜೆಪಿ ಟೀಕಿಸಿದೆ. ಇದೇ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿರುದ್ಯೋಗಿ ಯುವಕರಿಗಾಗಿ ಸಿಖೋ ಕಮಾವೋ ಯೋಜನೆಯನ್ನು  ಘೋಷಣೆ ಮಾಡಿದ್ದಾರೆ. ಈ ಯೋಜನೆಯಲ್ಲಿ ನಿರುದ್ಯೋಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ಜತೆಗೆ ಮಾಸಿಕ 8 ಸಾವಿರದಿಂದ 10 ಸಾವಿರ ರೂ.ಶಿಷ್ಯವೇತನ ನೀಡಲಾಗುತ್ತದೆ.

Exit mobile version