ಬೆಂಗಳೂರು : ಸ್ಪಷ್ಟ ಬಹುಮತದೊಂದಿಗೆ ಗೆದ್ದು ಬೀಗಿರುವ ಕಾಂಗ್ರೆಸ್ ಪಕ್ಷದಲ್ಲಿ ಈಗ ಕರುನಾಡ ದೊರೆ ಆಯ್ಕೆ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೊನೆಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈ ನಾಯಕರು ಒಂದು ನಿರ್ಣಯಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಹೌದು, ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಪ್ರತ್ಯೇಕವಾಗಿ ಸಂಧಾನ ಮಾತುಕತೆ ಕೂಡ ನಡೆಸಲಾಗಿದೆ. ಎಐಸಿಸಿ ವೀಕ್ಷಕರು ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು.
ಆದರೆ ಇದೀಗ ಸಿಎಂ ಆಯ್ಕೆ ವಿಚಾರ ಮಾತ್ರ ಕಗ್ಗಂಟಾಗಿಯೇ ಉಳಿಯಿತು. ಶಾಸಕಾಂಗ ಪಕ್ಷದ ಸಭೆ ಜತೆಗೆ ಪ್ರತ್ಯೇಕ ಸಂಧಾನ ಮಾತುಕತೆ ನಡೆದರೂ ಆಯ್ಕೆ ವಿಚಾರ ಇತ್ಯರ್ಥವಾಗಲಿಲ್ಲ. ಇಷ್ಟು ದಿನ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ, ಈಗ ಅಧಿಕಾರಕ್ಕಾಗಿ ಗೊಂದಲ ಮಾಡಿಕೊಳ್ಳುವುದು ಬೇಡ, ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡೋಣ, ಉಳಿದಿದ್ದು ಹೈಕಮಾಂಡ್ ಗೆ ಬಿಡೋಣ ಎಂಬ ನಿಲುವಿಗೆ ಬರಲಾಯಿತು.
ಕರ್ನಾಟಕ ರಾಜ್ಯಕ್ಕೆ ಸಿಕ್ಕಿರುವ ಈ ಗೆಲುವು ಸ್ವಾಭಿಮಾನ ಹಾಗೂ ಬ್ರಾಂಡ್ ಕರ್ನಾಟಕದ ಮರುಸ್ಥಾಪಿಸಲು ಪ್ರಗತಿ ಹಾಗೂ ಸೌಹಾರ್ದತೆಗೆ ಸಿಕ್ಕಿರುವ ಜಯವಾಗಿದ್ದು,ಇದು ರಾಜ್ಯದ 6.5 ಕೋಟಿ ಕನ್ನಡಿಗರು ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಪಕ್ಷಕ್ಕೆ ನೀಡಿರುವ ಪ್ರಚಂಡ ಬಹುಮತಕ್ಕೆ ಪಕ್ಷವು ಅಭಾರಿಯಾಗಿದೆ ಎಂದು ಹೇಳಿದರು.
ಭಗವಾನ್ ಬಸವಣ್ಣನವರಿಂದ ಅಕ್ಕಮಹಾದೇವಿಯವರವರೆಗೆ, ಕನಕದಾಸರು, ಮಹರ್ಷಿ ವಾಲ್ಮೀಕಿಗಳು, ಶ್ರೀ ನಾರಾಯಣ ಗುರುಗಳು, ಸಂತ ಸೇವಾಲಾಲರು, ಶಿಶುನಾಳ ಶರೀಫರು, ಕೆಂಪೇಗೌಡರು, ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಕುವೆಂಪುರವರವರೆಗೂ ಇತರೆ ಎಲ್ಲಾ ಮಹನೀಯರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯ, ಸಮಾಜ ಸುಧಾರಣೆ, ಪಾರದರ್ಶಕ ಹಾಗೂ ದಕ್ಷ ಆಡಳಿತವನ್ನು ನಡೆಸಿಕೊಂಡು ಬರಲಾಗಿದೆ. 2023ರ ಮೇ 13 ರಂದು ಪ್ರಕಟವಾಗಿರುವ ಐತಿಹಾಸಿಕ ಫಲಿತಾಂಶದಲ್ಲಿ ರಾಜ್ಯದ ಒಳಗೆ ಹಾಗೂ ಹೊರಗೆ ದ್ವೇಷ ಹಾಗೂ ವಿಭಜನೆ ಕೇಂದ್ರಿತ ರಾಜಕೀಯದಿಂದಾಗಿ ಅಪಾಯದಲ್ಲಿ ಸಿಲುಕಿರುವ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗೆ ಕರ್ನಾಟಕ ಮತ್ತೊಮ್ಮೆ ಈ ಗೆಲುವಿನಿಂದ ಶಕ್ತಿ ತುಂಬಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಬಹಳ ಪ್ರಭಾವಶಾಲಿ ಪ್ರಚಾರ ಹಾಗೂ ರೋಡ್ ಶೋ ಗಳನ್ನು ನಡೆಸಿ ಆ ಮೂಲಕ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಿದ ಪ್ರಿಯಾಂಕ ಗಾಂಧಿ ವಾದ್ರ ಅವರಿಗೂ ಧನ್ಯವಾದ ಅರ್ಪಿಸಿದೆ.
ಈ ಚುನಾವಣೆಯಲ್ಲಿ ಅವಿರತ ಶ್ರಮ, ಬದ್ಧತೆಯ ಮೂಲಕ ಪಕ್ಷವನ್ನು ಸಂಘಟಿಸಿದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಇಡೀ ಕಾಂಗ್ರೆಸ್ ತಂಡಕ್ಕೆ ಧನ್ಯವಾದಗಳನ್ನು ತಿಳಿಸುತ್ತದೆ. ಇಬ್ಬರೂ ನಾಯಕರು ಹಗಲಿರಳು ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯದ ಮೂಲೆ ಮೂಲೆ ಪ್ರವಾಸ ಮಾಡಿ ಪ್ರತಿಯೊಂದು ವರ್ಗದ ಜನರನ್ನು ತಲುಪಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲು ಶ್ರಮಿಸಿದ್ದಾರೆ.
ಈ ಇದೇ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಹಗರಣಗಳು, ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಹೋರಾಡಿದ ರಾಜ್ಯದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಶಾಸಕಾಂಗ ಪಕ್ಷವು ಧನ್ಯವಾದಗಳು. ಪಕ್ಷದ ಪದಾಧಿಕಾರಿಗಳು, ಅಧಿಕಾರವಧಿ ಮುಗಿಸಿರುವ ಕಾಂಗ್ರೆಸ್ ಶಾಸಕರು, ಪಕ್ಷದ ಪ್ರಮುಖ ಘಟಕಗಳು, ವಿಭಾಗಗಳು, ವರುಣ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮವಿಲ್ಲದಿದ್ದರೆ ಈ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷವು ಇವರಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದೆ.
ಈ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನರಿಗೆ ಸಿಕ್ಕಿರುವ ಗೆಲುವು ಕಾಂಗ್ರೆಸ್ ಸಿದ್ಧಾಂತವನ್ನು ತನುಮನದಲ್ಲಿ ಅಳವಡಿಸಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಿಗೆ ಸಂಭ್ರಮವನ್ನು ತಂದುಕೊಟ್ಟಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷವು ಕನ್ನಡ ನಾಡಿನ ಜನರಿಗೆ ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತವನ್ನು ನೀಡಲು ಪರಿಶ್ರಮ ಹಾಗೂ ಒಗ್ಗಟ್ಟಿನ ಮೂಲಕ ಕೆಲಸ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದ 6.5 ಕೋಟಿ ಕನ್ನಡಿಗರ ಹಿತ ರಕ್ಷಣೆ ಹಾಗೂ ಸೇವೆ ನಮ್ಮ ಆದ್ಯ ಕರ್ತವ್ಯವಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆ ನಮ್ಮ ಸರ್ಕಾರದ ನೀತಿಗಳ ಮೂಲ ಉದ್ದೇಶವಾಗಿರಲಿದೆ. ಜನರ ಕಲ್ಯಾಣಕ್ಕಾಗಿ ಸರ್ಕಾರವು ಮುಂದಿನ ದಿನಗಳಲ್ಲಿ ರೂಪಿಸುವ ಪ್ರತಿಯೊಂದು ನೀತಿಗಳು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಹಾಗೂ ಕುಟುಂಬದ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಕೈಗೊಳ್ಳಲು ನಿರ್ಣಯಿಸಲಾಗಿದೆ. ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಿದೆ. ಕನ್ನಡ ನಾಡಿನ ಸಂಸ್ಕೃತಿ, ಭಾಷೆ ಹಾಗೂ ಭವ್ಯ ಪರಂಪರೆಯನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮರು ಸ್ಥಾಪಿಸಲು ಹಾಗೂ ಭಾರತದಲ್ಲಿ ಕರ್ನಾಟಕ ರಾಜ್ಯ ಶಾಂತಿ, ಪ್ರಗತಿ ಹಾಗೂ ಸೌಹಾರ್ದತೆ ವಿಚಾರಗಳಲ್ಲಿ ಅಗ್ರ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ.