Site icon PowerTV

RCB ತೂಫಾನ್ ಬೌಲಿಂಗ್, 59 ರನ್ ಗೆ ರಾಜಸ್ಥಾನ್ ಆಲೌಟ್ : ಆರ್​ಸಿಬಿಗೆ 112 ರನ್ ಜಯ

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತೂಫಾನ್ ಬೌಲಿಂಗ್ ಗೆ ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಗಳು ಪೆವಿಲಿಯನ್ ಪೆರೇಡ್ ನಡೆಸಿದರು.

ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ನ 60ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 112 ರನ್ ಗಳ ಅದ್ವಿತೀಯ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.

ಆರ್ ಸಿಬಿ ಪರ ಬೆಂಕಿ ಬೌಲಿಂಗ್ ಮಾಡಿದ ಪರ್ನೆಲ್ 3 ವಿಕೆಟ್ ಉರುಳಿಸಿದರು. ಬ್ರಾಸ್ ವೆಲ್ ಹಾಗೂ ಕರಣ್ ಶರ್ಮಾ ತಲಾ ಎರಡು ವಿಕೆಟ್, ಗ್ಲೇನ್ ಮ್ಯಾಕ್ಸ್ ವೆಲ್ ಹಾಗೂ ಸಿರಾಜ್ ತಲಾ ಒಂದು ವಿಕೆಟ್ ಪಡೆದು ಗೆಲುವಿನ ನಿರೀಕ್ಷೆಯಲ್ಲಿದ್ದ ರಾಜಸ್ಥಾನ್ ರಾಯಲ್ಸ್ ಕನಸನ್ನು ನುಚ್ಚು ನೂರು ಮಾಡಿದರು.

ಜೈಸ್ವಾಲ್, ಬಟ್ಲರ್ ಶೂನ್ಯಕ್ಕೆ ವಿಕೆಟ್

172 ರನ್ ಗಳ ಸವಾಲಿನ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಗೆ ಆರ್ ಸಿಬಿ ಆರಂಭದಲ್ಲೇ ದೊಡ್ಡ ಆಘಾತ ನೀಡಿತು. ಮೊಹಮ್ಮದ್ ಸಿರಾಜ್ ಬೌಲ್ ಮಾಡಿದ ಮೊದಲ ಓವರ್ ​ನಲ್ಲಿ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಮತ್ತೊಬ್ಬ ಆರಂಭಿಕ ಆಟಗಾರ ಜೋಸ್ ಬಟ್ಲರ್ ಕೂಡ ಪರ್ನೆಲ್ ಓವರ್ ನಲ್ಲಿ ಶೂನ್ಯಕ್ಕೆ ಔಟ್ ಆದರು.

ನಾಯಕ ಸಂಜು ಸ್ಯಾಮ್ಸನ್ ಕೇವಲ 4 ರನ್ ಗಳಿಸಿ ಪರ್ನೆಲ್ ಗೆ ವಿಕೆಟ್ ಒಪ್ಪಿಸಿದರು. ಜೋ ರೂಟ್ 10 ರನ್ ಗಳಿಸಿ ಪರ್ನೆಲ್ ಗೆ ವಿಕೆಟ್ ನಿಡಿದರು. ಕನ್ನಡಿಗ ದೇವದತ್ ಪಡಿಕಲ್ ಕೇವಲ್ 4 ರನ್ ಗಳಿಸಿ ಬ್ರೆಸ್​ವೆಲ್ ಓವರ್ ನಲ್ಲಿ ಸಿರಾಜ್ ಗೆ ಕ್ಯಾಚ್ ನೀಡಿದರು. ಆಲ್ ರೌಂಡರ್ ಆರ್.ಅಶ್ವಿನ್ ಶೂನ್ಯಕ್ಕೆ ನಿರ್ಗಮಿಸಿದರು.

ರಾಜಸ್ಥಾನಕ್ಕೆ 172 ರನ್ ಟಾರ್ಗೆಟ್

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ಫಾಪ್ ಡುಪ್ಲೆಸಿ ಹಾಗೂ ಮ್ಯಾಕ್ಸ್ ವೆಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 171 ರನ್ ಕಲೆಹಾಕಿತು. ಆರ್ ಆರ್ ಬೌಲರ್ ಗಳನ್ನು ಬೆಂಡೆತ್ತಿದ ನಾಯಕ ಫಾಪ್ 44 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಮ್ಯಾಕ್ಸ್ ವೆಲ್ 33 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಬಾರಿಸಿ 54 ರನ್ ಚಚ್ಚಿದರು. ಕೊನೆಯಲ್ಲಿ ಅಬ್ಬರಿಸಿದ ಅನುಜ್ ರಾವತ್ ಅಜೇಯ 29 ರನ್ ಸಿಡಿಸಿದರು. ವಿರಾಟ್ ಕೊಹ್ಲಿ (18) ಹಾಗೂ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು.

Exit mobile version