Site icon PowerTV

ಇದು ‘ಭಾರತವನ್ನು ಒಗ್ಗೂಡಿಸುವ ಗೆಲುವು’ : ಪ್ರಿಯಾಂಕಾ ಗಾಂಧಿ ಹರ್ಷ

ಬೆಂಗಳೂರು : ‘ಜೈ ಕರ್ನಾಟಕ, ಜೈ ಕಾಂಗ್ರೆಸ್’ ಎಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದ್ದು, ಕರುನಾಡ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಕನ್ನಡದಲ್ಲೇ ಟ್ವೀಟ್ ಮಾಡಿರುವ ಅವರು, ಭ್ರಷ್ಟಾಚಾರ, ಕೋಮುವಾದ, ಬೆಲೆ ಏರಿಕೆ ವಿರುದ್ಧ ಕನ್ನಡಿಗರು ಕೈ ಏರಿಸಿದ್ದಾರೆ ಮತ್ತು ನಮ್ಮ ರಾಷ್ಟ್ರವನ್ನು ಒಗ್ಗೂಡಿಸುವುದಕ್ಕಾಗಿ ಕರ್ನಾಟಕದ ಜನತೆ ಕಾಂಗ್ರೆಸ್ ಕೈ ಹಿಡಿದಿದ್ದಾರೆ ಎಂದು ವರ್ಣಿಸಿದ್ದಾರೆ.

ಇದನ್ನೂ ಓದಿ : ಈ ಸೋಲು ಬಿಜೆಪಿಗೆ ಹೊಸದೇನಲ್ಲ : ಯಡಿಯೂರಪ್ಪ

ಕಾಂಗ್ರೆಸ್‌ ಕಾರ್ಯಕರ್ತರಿಗೆ ಮತ್ತು ಕರ್ನಾಟಕ ಕಾಂಗ್ರೆಸ್‌ನ ನಾಯಕರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಕರ್ನಾಟಕದ ಜನತೆಗೆ ಕಾಂಗ್ರೆಸ್‌ ಪಕ್ಷವು ನೀಡಿದ್ದ ಭರವಸೆಗಳನ್ನು ಪೂರ್ಣಗೊಳಿಸಲು ಬದ್ಧವಾಗಿದೆ ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪರ ಐತಿಹಾಸಿಕ ತೀರ್ಪು ನೀಡಿದ ಕರ್ನಾಟಕದ ಜನತೆಗೆ ತುಂಬು ಹೃದಯದ ಧನ್ಯವಾದಗಳು. ಜೈ ಕರ್ನಾಟಕ, ಜೈ ಕಾಂಗ್ರೆಸ್‌ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಹನುಮಾನ್ ದೇಗುಲದಲ್ಲಿ ಪ್ರಾರ್ಥನೆ

ರಾಜ್ಯ ವಿಧಾನಸಭಾ ಚುನಾವಣಾ ಮತ ಎಣಿಕೆ ಆರಂಭಕ್ಕೂ ಮುನ್ನ ಪ್ರಿಯಾಂಕಾ ಗಾಂಧಿ ಅವರು ರಾಮಭಕ್ತ ಹನುಮನ ಮೊರೆ ಹೋಗಿದ್ದರು. ಫಲಿತಾಂಶ ಹಿನ್ನೆಲೆಯಲ್ಲಿ ಪಕ್ಷದ ಗೆಲುವಿಗಾಗಿ ಅವರು ಶಿಮ್ಲಾದ ಜಖುವಿನ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

Exit mobile version