Site icon PowerTV

ಕೆನ್ನೆ ಹಿಂಡಿದ ಯಡಿಯೂರಪ್ಪ, ಮುಗುಳ್ನಕ್ಕ ನಟಿ ಶೃತಿ

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಇದೀಗ, ಬಿಜೆಪಿ ಪರ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ಅವರು ಒತ್ತಡದ ನಡುವೆಯೂ ತುಂಬಾನೇ ಸಂತೋಷದಿಂದಿದ್ದಾರೆ.

ಹೌದು, ಶಿಕಾರಿಪುರದಲ್ಲಿ ನಡೆದ ಈ ಘಟನೆಯೇ ಇದಕ್ಕೆ ಸಾಕ್ಷಿ ಎನ್ನಬಹುದು. ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆ ವೇಳೆ ಬಿ.ಎಸ್ ಯಡಿಯೂರಪ್ಪ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನಟಿ ಶೃತಿ ಅವರ ಕೆನ್ನೆ ಹಿಂಡಿ, ತಲೆ ಸವರಿ ಆಶೀರ್ವಾದ ಮಾಡಿರುವುದು ಗಮನ ಸೆಳೆದಿದೆ.

ಬಿ.ಎಸ್‌ ಯಡಿಯೂರಪ್ಪ ಅವರು ತೋರಿದ ಆತ್ಮೀಯತೆಗೆ ನಟಿ ಶೃತಿ ಅವರೂ ಖುಷಿಯಿಂದ ಮುಗುಳ್ನಕ್ಕಿದ್ದಾರೆ. ಹಿರಿಯ ನಾಯಕರೊಬ್ಬರು ಕಿರಿಯರನ್ನು ಗೌರವಿಸುವ ರೀತಿ ನೋಡಿ ಎಲ್ಲರೂ ಖುಷಿಟ್ಟಿದ್ದಾರೆ. ಬಿಎಸ್​ವೈ ರಾಜಕೀಯ ಒತ್ತಡದ ನಡುವೆಯೂ ಯಾವಾಗಲೂ ಖುಷಿಯಿಂದ ಇರುತ್ತಾರೆ ಎಂಬುದಕ್ಕೆ ಇದು ಉದಾಹರಣೆಯೇ ಸರಿ.

ವಿಜಯೇಂದ್ರನನ್ನ ಸದಾ ಆಶೀರ್ವದಿಸಿ

ವಿಜಯೇಂದ್ರ ನಾಮಪತ್ರ ಸಲ್ಲಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿ.ಎಸ್ ಯಡಿಯೂರಪ್ಪ ಅವರು, ರಾಜ್ಯ ಬಿಜೆಪಿ ಉಪಾಧ್ಯಕ್ಷ, ಯುವನಾಯಕ ಹಾಗೂ ನನ್ನ ಪುತ್ರ ಬಿ.ವೈ ವಿಜಯೇಂದ್ರ ಇಂದು ಶಿಕಾರಿಪುರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನನ್ನನ್ನು ಸದಾ ಆಶೀರ್ವದಿಸಿದಂತೆಯೇ ನಿಮ್ಮ ಸಮರ್ಥ ಪ್ರತಿನಿಧಿಯಾಗಿ ಕೆಲಸ ಮಾಡಲಿರುವ ವಿಜಯೇಂದ್ರ ಅವರನ್ನು ಕೂಡ ಹರಸುವಂತೆ ಕ್ಷೇತ್ರದ ಮತದಾರ ಬಂಧುಗಳಲ್ಲಿ ವಿನಮ್ರನಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ಸಿಎಂ ಬೊಮ್ಮಾಯಿಯನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕಿಚ್ಚ ಸುದೀಪ್‌ ಮನವಿ

ಕಾರ್ಯಕರ್ತರು ಶಕ್ತಿ ತುಂಬಿದ್ದಾರೆ

ಶಿಕಾರಿಪುರ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿರುವ ಅವರು, ಶಿಕಾರಿಪುರದಲ್ಲಿ ಬೃಹತ್ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಸೇರಿ ಹಲವರು ಭಾಗಿಯಾಗುತ್ತಾರೆ. ಕಾರ್ಯಕರ್ತರು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಶಿಕಾರಿಪುರ ಕ್ಷೇತ್ರದ ಜನ ಬಿ.ಎಸ್​ ಯಡಿಯೂರಪ್ಪ, ಬಿ.ವೈ ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದಾರೆ. ನನಗೂ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ. ಶಿಕಾರಿಪುರದ ಜೊತೆ ಬೇರೆ ಕ್ಷೇತ್ರಗಳಲ್ಲೂ ಒಂದು ವಾರ ಪ್ರಚಾರ ಮಾಡುವೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

Exit mobile version