Site icon PowerTV

ತಾಕತ್ತಿದ್ರೆ ‘ಲಿಂಗಾಯತರನ್ನ ಸಿಎಂ’ ಅಭ್ಯರ್ಥಿಯಾಗಿ ಘೋಷಿಸಲಿ : ಕಟೀಲ್ ಸವಾಲು

ಮಂಗಳೂರು : ರಾಜ್ಯದಲ್ಲಿ ಲಿಂಗಾಯತ ನಾಯಕರು ಹಾಗೂ ಲಿಂಗಾಯತ ಮುಖ್ಯಮಂತ್ರಿ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​ ನಾಯಕರಿಗೆ ತಾಕತ್ತಿದ್ರೆ ಲಿಂಗಾಯತರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಲ್ಲಾ ಸಂದರ್ಭದಲ್ಲಿ ಬಿಜೆಪಿ ಮಾತ್ರ ಲಿಂಗಾಯತ ನಾಯಕರನ್ನು ಮುಖ್ಯಮಂತ್ರಿ ಮಾಡುತ್ತದೆ. ಬೇರೆ ಯಾವ ಪಕ್ಷಕ್ಕೂ ಆ ತಾಕತ್ತಿಲ್ಲ, ಇದ್ದರೆ ಘೋಷಣೆ ಮಾಡಲಿ. ಕಾಂಗ್ರೆಸ್ ಲಿಂಗಾಯತರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್​ಗೆ ಅಭ್ಯರ್ಥಿ ಕೊರತೆ

ನಾವು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾರ್ಗದರ್ಶನ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ಕಾಂಗ್ರೆಸ್ ಗೆ ಬಹಳ ಕ್ಷೇತ್ರದಲ್ಲಿ ಅಭ್ಯರ್ಥಿ ಕೊರತೆ ಇದೆ. ಡಿಸೆಂಬರ್​ನಲ್ಲೇ ಅವರು ಆಯ್ಕೆ ಪ್ರಕ್ರಿಯೆ ಆರಂಭಿಸಿದರೂ ಈವರೆಗೆ ಆಗಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ 130 ಸ್ಥಾನ ಪಡೆದು ಬಹುಮತ ಪಡೆಯುವ ವಿಶ್ವಾಸ ಇದೆ: ಸಿಎಂ ಬಸವರಾಜ ಬೊಮ್ಮಾಯಿ

ಬಂಡುಕೋರರಿಗೆ ಕಾಯುತ್ತಿದ್ದಾರೆ

ನಾವು ಹತ್ತು ದಿವಸದಲ್ಲಿ ಅಭ್ಯರ್ಥಿ ಅಯ್ಕೆ ಪ್ರಕ್ರಿಯೆ ಮುಗಿಸಿದ್ದೇವೆ. ಅವರು ನಾಲ್ಕು ತಿಂಗಳಾಯ್ತು. ಅವರಿಗೆ ಅಭ್ಯರ್ಥಿ ಕೊರತೆ ಇದೆ. ನಮ್ಮ ಬಂಡುಕೋರರಾಗಿ ಹೊರ ಬರುವ ಅಭ್ಯರ್ಥಿಗಳನ್ನು ಕಾಯುತ್ತಿದ್ದಾರೆ. ಕಾಂಗ್ರೆಸ್ ನ ಹೀನಾಯ ಸ್ಥಿತಿ ನೋಡಿ ಬೇಜಾರಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಳಗ

ಕಾಂಗ್ರೆಸ್​ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಳಗ ನಡೆಯುತ್ತಾ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಈಗ ಡಾ.ಜಿ ಪರಮೇಶ್ವರ್ ಕೂಡ ಸಿಎಂ ರೇಸ್​ನಲ್ಲಿದ್ದಾರೆ ಎಂದು ಛೇಡಿಸಿದ್ದಾರೆ.

ನಮ್ಮದು ಕಾರ್ಯಕರ್ತರ ಆಧಾರದಲ್ಲಿ ಗೆಲ್ಲುವ ಪಕ್ಷ. ನಮ್ಮದು ಕ್ರಾಂತಿಕಾರಕ ಬದಲಾವಣೆ, ಇದು ಇಡೀ ದೇಶದಲ್ಲಿ ಆಗಿದೆ. 66 ರಿಂದ 77 ಜನ ಹೊಸ ಮುಖವನ್ನು ಚುನಾವಣೆ ಹೊತ್ತಲ್ಲಿ ತರುವ ಧೈರ್ಯ ಯಾರು ತೋರ್ತಾರೆ? ನಾವು ಧೈರ್ಯ ತೋರಿದ್ದೇವೆ, ಹಾಗಾಗಿ ಇದಕ್ಕೆಲ್ಲಾ ಭಯಪಡಲ್ಲ. ಈ ಕ್ರಾಂತಿಕಾರಿ ಹೆಜ್ಜೆ ರಾಜ್ಯದಲ್ಲೂ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version