Site icon PowerTV

ಇನ್ಮುಂದೆ ಗಂಡನ ಮನೆಯಲ್ಲೇ ಮುಂದುವರಿಯುತ್ತೇನೆ : ಲಕ್ಷ್ಮಣ ಸವದಿ

ಬೆಳಗಾವಿ : ನಾವು ತವರು ಮನೆ ಬಿಟ್ಟು ಗಂಡನ ಮನೆಗೆ ಬಂದಿದ್ದೇವೆ. ಇದೇ ನಮ್ಮ ಮನೆ ಅಂತಾ ಮುಂದುವರಿಯುತ್ತೇನೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಪಕ್ಷವನ್ನು ತವರು ಮನೆ ಹಾಗೂ ಕಾಂಗ್ರೆಸ್ ಪಕ್ಷವನ್ನು ಗಂಡನ ಮನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಓರ್ವ ಹೆಣ್ಣು ಮಗಳು 20 ರಿಂದ 25 ವರ್ಷ ತಂದೆ ತಾಯಿ ಬೆಳೆಸಿರುತ್ತಾರೆ. ಮದುವೆ ಆದ ಬಳಿಕ ಗಂಡನ ಮನೆಗೆ ಹೋಗುವಾಗ ಆ ಮನೆ ಹೇಗಿರುತ್ತೋ ಎಂಬ ಆತಂಕ, ಈ ಮನೆ ಬಿಟ್ಟು ಹೋಗುವ ದುಃಖ ಆಗುತ್ತದೆ. ನಾವು ಇವತ್ತು ತವರು ಮನೆ ಬಿಟ್ಟು ಗಂಡನ ಮನೆಗೆ ಬಂದಿದ್ದೇವೆ.  ಗಂಡನ ಮನೆಯವರು ಪ್ರೀತಿಯಿಂದ ಕಾಣುತ್ತಿದ್ದಾರೆ ಅಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಭಾವುಕರಾಗೋದು ಸಹಜ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಶೆಟ್ಟರ್ ಮನೆತನ ಜನಸಂಘದಿಂದ ಬಿಜೆಪಿಯವರೆಗೆ ಕೆಲಸ ಮಾಡಿದೆ. ಸಂಪೂರ್ಣವಾಗಿ ಸಂಘಪರಿವಾರ, ಬಿಜೆಪಿಯಲ್ಲಿ ಪಕ್ಷ ಕಟ್ಟಿ ಬೆಳೆಸಲು ಅವರದ್ದೇ ಆದ ಸೇವೆಯಿದೆ. ಮನೆ ಬಿಟ್ಟು ಹೊರಗೆ ಹೋಗುವಾಗ ಭಾವುಕರಾಗೋದು ಸಹಜ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ 4ನೇ ಪಟ್ಟಿ ಬಿಡುಗಡೆ : ಇನ್ನೂ 8 ಕ್ಷೇತ್ರದ ಟಿಕೆಟ್ ಕಗ್ಗಂಟು

ಸಂತೋಷ ಬಗ್ಗೆ ನೋ ರಿಯಾಕ್ಷನ್

ರಾಜ್ಯ ಬಿಜೆಪಿಯಲ್ಲಿ ಬಿ.ಎಲ್‌ ಸಂತೋಷ್ ಕಾರುಬಾರು ನಡೀತಿದೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ಬಗ್ಗೆ ಪ್ರಿಕ್ರಿಯಿಸಿರುವ ಅವರು, ಬಿ.ಎಲ್.ಸಂತೋಷ ಬಗ್ಗೆ ನಾನು ಯಾವುದೇ ಚಕಾರ ಎತ್ತಲ್ಲ. ಅವರ ಬಗ್ಗೆ ಯಾವುದೇ ಟೀಕೆ ಟಿಪ್ಪಣಿ ಮಾಡಲ್ಲ, ಅದು ನನಗೆ ಇಷ್ಟನೂ ಇಲ್ಲ ಎಂದು ಜಾಣ ನಡೆ ಪ್ರದರ್ಶಿಸಿದ್ದಾರೆ.

ಬಿಜೆಪಿಯಲ್ಲಿ 20 ವರ್ಷ ನನ್ನ ಜೊತೆಗಿದ್ದ ಹಲವರು ಕಾಂಗ್ರೆಸ್ ಸೇರಿದ್ದಾರೆ. ಮೂಲ ಕಾಂಗ್ರೆಸ್, ನನ್ನ ಜೊತೆ ಬಂದ ಅನೇಕರು ಬೆಂಬಲಕ್ಕೆ ನಿಂತಿದ್ದಾರೆ. ಆರು ಬಾರಿ ನಾಮಪತ್ರ ಸಲ್ಲಿಸಿದ್ದೆ, ಇಂದು ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸ್ಫೂರ್ತಿ ಬಂದಿದೆ, ನಾನು ಗೆಲ್ಲುವ ಆತ್ಮವಿಶ್ವಾಸಕ್ಕೆ ಸಿಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version