Site icon PowerTV

ಮೋದಿಯವರೇ, ಬಂಡೀಪುರವನ್ನು ಅದಾನಿಗೆ ಮಾರಬೇಡಿ : ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಇಂದು ಬಂಡಿಪುರಕ್ಕೆ ಭೇಟಿ ನೀಡಿದ್ದು, ಸಫಾರಿಯಲ್ಲಿ ಭಾಗಿಯಾಗಿದ್ದರು. ಇದಕ್ಕೆ ವಿಪಕ್ಷಗಳು ಸೇರಿದಂತೆ ಹಲವರು ವ್ಯಂಗ್ಯವಾಡಿದ್ದಾರೆ.

70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ರಾಜ್ಯ ತಿರುಗೇಟು ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರೇ, ಇಂದು ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರದ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ ಎಂದು ಹೇಳಿದೆ.

ಇಂದಿರಾಗಾಂಧಿಯವರ ಫೋಟೋವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಾಜ್ಯ ಕಾಂಗ್ರೆಸ್, ಅದರ ಪರಿಣಾಮವೇ ಇಂದು ಹುಲಿಗಳ ಸಂಖ್ಯೆ ಏರಿಕೆ ಕಂಡಿದೆ. ತಮ್ಮಲ್ಲಿ ಮನವಿ-ಬಂಡೀಪುರವನ್ನು ಅದಾನಿಗೆ ಮಾರಬೇಡಿ ಎಂದು ಪ್ರಧಾನಿ ಮೋದಿಗೆ ಕುಟುಕಿದೆ.

ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ?

ನಟ ಪ್ರಕಾಶ್ ರೈ ಕೂಡ ಪ್ರಧಾನಿ ಮೋದಿ ಸಫಾರಿ ಕುರಿತು ವ್ಯಂಗ್ಯವಾಡಿದ್ದಾರೆ. ಮೋದಿಯವರ ಕೆಲವು ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ‘ನಾನು ಯಾರು ಬಲ್ಲೆಯೇನು?. ಪ್ರಚಾರ ಮಂತ್ರಿನಾ? ಅಥವಾ ಪ್ರಧಾನ ಮಂತ್ರಿನಾ? ಹೇಳಿ ನೋಡೊಣ?’ ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : ‘ಸತ್ಯವೇ ನನ್ನ ಅಸ್ತ್ರ, ಸತ್ಯವೇ ನನಗೆ ಆಸರೆ’ : ರಾಹುಲ್ ಗಾಂಧಿ

ಸಫಾರಿ ಡ್ರೆಸ್‌ನಲ್ಲಿ ನಮೋ ಮಿಂಚು

ಬಂಡೀಪುರ ಉದ್ಯಾನದ ಸಫಾರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಬಂದಿಳಿದ ಮೋದಿ ಸಫಾರಿ ಡ್ರೆಸ್‌ನಲ್ಲಿ ಮಿಂಚಿದರು. ಖಾಕಿ ಬಣ್ಣದ ಟೀ-ಶರ್ಟ್ ಹಾಗೂ ಪ್ಯಾಂಟ್ ಧರಿಸಿರುವ ಮೋದಿ ಅವರು, ಕಪ್ಪು ಟೋಪಿ ಮತ್ತು ಕಪ್ಪು ಬೂಟುಗಳನ್ನು ಸಹ ಧರಿಸಿದ್ದರು. ಕೈಯಲ್ಲಿ ಅರ್ಧ ಜಾಕೆಟ್‌ನೊಂದಿಗೆ ಮೋದಿ ಕಾಣಿಸಿಕೊಂಡಿದ್ದರು. ಈ ಫೋಟೋಗಳನ್ನು ಬಳಸಿ ವಿಪಕ್ಷಗಳು ಮೋದಿಗೆ ತಿರುಗೇಟು ನೀಡಿವೆ.

Exit mobile version