Site icon PowerTV

ಸದನದಲ್ಲೇ ‘ಬ್ಲೂ ಫಿಲಂ’ ನೋಡಿದ ಬಿಜೆಪಿ ಶಾಸಕ : ವಿಡಿಯೋ ವೈರಲ್

ಬೆಂಗಳೂರು : ತನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಪರಿಹಾರ ಒದಗಿಸಬೇಕಾದ ಶಾಸಕನೋಬ್ಬ ವಿಧಾನಸಭಾ ಕಲಾಪದಲ್ಲಿ ಬ್ಲೂ ಫಿಲಂ ನೋಡಿ ಸಿಕ್ಕಿಬಿದ್ದಿದ್ದಾನೆ.

ಹೌದು, ತ್ರಿಪುರದಲ್ಲಿ ವಿಧಾನಸಭೆ ಅಧಿವೇಶನ ನಡೆಯುವ ಸಮಯದಲ್ಲಿಯೇ ಬಿಜೆಪಿಯ ಶಾಸಕ ಪೋರ್ನ್ ವಿಡಿಯೋ ನೋಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕಿಡಿಕಾರಿದ್ದಾರೆ.

ಪೋರ್ನ್‌ ವಿಡಿಯೋ ಕ್ಲಿಪ್‌ ವೀಕ್ಷಣೆ

ತ್ರಿಪುರದ ಬಾಗ್‌ಬಸಾ ಕ್ಷೇತದ ಶಾಸಕರಾಗಿರುವ ಜಾದಾಬ್‌ ಲಾಲ್‌ ನಾಥ್‌ ತಮ್ಮ ಮೊಬೈಲ್‌ ಫೋನ್‌ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವುದನ್ನು ಕ್ಯಾಮೆರಾ ಸೆರೆ ಮಾಡಿದೆ. ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲಿಯೇ ತಮ್ಮ ಮೊಬೈಲ್‌ ತೆರೆದು ಇರಿಸಿಕೊಂಡಿದ್ದ ಜಾದಾಬ್‌ ಲಾಲ್‌ ನಾಥ್‌, ಅದರಲ್ಲಿ ಪೋರ್ನ್‌ ವಿಡಿಯೋ ಕ್ಲಿಪ್‌ಗಳನ್ನು ನೋಡುತ್ತಿದ್ದರು. ಈ ವಿಡಿಯೋವೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ದೃಶ್ಯ ಸೆರೆ ಹಿಡಿದ ಹಿಂದೆ ಕುಳಿತ ಶಾಸಕ

ಕಲಾಪದಲ್ಲಿ ರಾಜ್ಯ ಬಜೆಟ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಜಾದಬ್‌ ಲಾಲ್‌ ವಿಡಿಯೋ ವೀಕ್ಷಿಸಿದ್ದಾರೆ. ಶಾಸಕರ ಹಿಂದೆ ಕುಳಿತಿರುವ ಯಾರೋ ಒಬ್ಬರು ಈ ವಿಡಿಯೋವನ್ನು ಸೆರೆಹಿಡಿದ್ದಾರೆ. ಸ್ಪೀಕರ್‌ ಹಾಗೂ ಇತರ ಶಾಸಕರು ಮಾತನಾಡುತ್ತಿರುವ ಸಂದರ್ಭದಲ್ಲಿ ಫೋನ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುತ್ತಿದ್ದರು ಎಂದು ಆರೋಪ ಮಾಡಿದ್ದಾರೆ.

ಬಿಜೆಪಿ ಪಕ್ಷ ಈ ಕುರಿತು ಶಾಸಕನಿಂದ ವಿವರಣೆ ಪಡೆಲು ಮುಂದಾಗಿದೆ. ಬಿಜೆಪಿ ಕಚೇರಿಗೆ ಆಗಮಿಸುವಂತೆ ಸೂಚನೆಯನ್ನೂ ನೀಡಿದೆ. ಜಾದಾಬ್‌ ಲಾಲ್‌ ನಾಥ್‌ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಅಧಿವೇಶನ ಮುಗಿದ ಬೆನ್ನಲ್ಲಿಯೇ ಅವರು ತರಾತುರಿಯಲ್ಲಿ ನಿರ್ಗಮಿಸಿದ್ದಾರೆ.

Exit mobile version