Site icon PowerTV

ಶ್ರೀನಿವಾಸ್.. ‘ತಂದೆ-ಮಗ ನನಗೆ ಇದೇ ರೀತಿ ಮಾಡಿದ್ರು’ : ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತೃ ಪಕ್ಷ ಜೆಡಿಎಸ್ ಹಾಗೂ ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಕುರಿತು ಶಾಕಿಂಗ್ ಮಾಹಿತಿ ಹೊರಹಾಕಿದ್ದಾರೆ. ತಾನು ಜೆಡಿಎಸ್ ಪಕ್ಷ ಬಿಟ್ಟಾಗ ಅವರಿಂದಾದ ಅವಮಾನ ಏನೆಂದು ಬಿಚ್ಚಿಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರನ್ನು ಕಾಂಗ್ರೆಸ್‌ ಪಕ್ಷ ಬರಮಾಡಿಕೊಂಡ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್‌ನಲ್ಲಿದ್ದ ಶ್ರೀನಿವಾಸ್‌ ಈಗ ಪಕ್ಷಕ್ಕೆ ಮರಳಿದ್ದಾರೆ. ಜೆಡಿಎಸ್‌ ಎಂದರೆ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರ ಕುಟುಂಬದ ನಿರ್ಧಾರಗಳಿಗೆ ಸೀಮಿತವಾದ ಪಕ್ಷ ಎಂದು ಗೌಡ್ರು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಂದೆಮಗ ಮೂಲೆಗುಂಪು ಮಾಡ್ತಾರೆ

ತಂದೆ-ಮಗನ ನಿರ್ಧಾರಗಳನ್ನು ಮೀರಿದರೆ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಳಸಿದರೆ ಅಂತಹವರನ್ನು ಆ ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಾರೆ. ಅವಮಾನ ಮಾಡಿ ಪಕ್ಷದಿಂದ ಹೊರಹಾಕುತ್ತಾರೆ. ಶ್ರಿನಿವಾಸ್.. ನನಗೆ ಅದೇ ರೀತಿ ಮಾಡಿದ್ದರು. ಈಗ ನಿನಗೂ ಹಾಗೆಯೇ ಮಾಡಿದ್ದಾರೆ ಎಂದು ಕುಟುಕಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷದ ಪರವಾದ ಅಲೆ ಎದ್ದಿದೆ. ಮುಂಬರುವ ವಿಧಾನಸಭಾ ಚುನಾವಣೆಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ಕಾರಣದಿಂದ ಜೆಡಿಎಸ್‌ ಮತ್ತು ಬಿಜೆಪಿಯ ಹಲವರು ಕಾಂಗ್ರೆಸ್‌ ಸೇರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅವಮಾನಕ್ಕೆ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಎಸ್‌.ಆರ್‌. ಶ್ರೀನಿವಾಸ್‌ ಅವರು, ಎಚ್‌.ಡಿ. ಕುಮಾರಸ್ವಾಮಿ ಅವರು ನನ್ನನ್ನು ಜೆಡಿಎಸ್‌ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದರು. ನಾನು ಶಾಸಕನಾಗಿರುವಾಗಲೇ ಬೇರೆ ಅಭ್ಯರ್ಥಿಯನ್ನು ಘೋಷಿಸಿದ್ದರು. ಅವರಿಂದ ಆದ ಅವಮಾನಕ್ಕೆ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಮೂಲತಃ ಕಾಂಗ್ರೆಸ್‌ ಪಕ್ಷದವನು. ಈಗ ಬಿಜೆಪಿ ಸೇರಲು ಇಷ್ಟ ಆಗಲಿಲ್ಲ. ಆದ್ದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದೇನೆ ಎಂದು ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Exit mobile version