Site icon PowerTV

ಜೆಡಿಎಸ್ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ : ಶೀಘ್ರ 37 ಮಂದಿ ‘ಕೈ’ ಸೇರ್ಪಡೆ ಎಂದ ಡಿಕೆಶಿ

ಬೆಂಗಳೂರು : ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾಜಿ ಜೆಡಿಎಸ್ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರು ಜೆಡಿಎಸ್‌ ಪಕ್ಷ ತೊರೆದಿದ್ದರು. ಇಂದು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಬಾವುಟ ನೀಡುವ ಮೂಲಕ ಎಸ್.ಆರ್ ಶ್ರೀನಿವಾಸ್‌ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಮಾತನಾಡಿ, ಎಸ್.ಆರ್ ಶ್ರೀನಿವಾಸ್‌ ಅವರ ಸೇರ್ಪಡೆಯಿಂದ ತುಮಕೂರು ಮಾತ್ರವಲ್ಲ ಹಲವು ಜಿಲ್ಲೆಗಳಲ್ಲಿ ಪಕ್ಷಕ್ಕೆ ಬಲ ಬಂದಿದೆ. ಅವರೊಬ್ಬ ನಿಷ್ಠಾವಂತ ಜನಸೇವಕ. ಅವರು ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಿದ್ದಾರೆ.

37 ಮಂದಿ ಕಾಂಗ್ರೆಸ್‌ ಸೇರ್ಪಡೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳಾಗಿದ್ದ ಹಲವರು ಸೇರಿದಂತೆ ಆ ಪಕ್ಷದ 37 ಮಂದಿ ನಾಯಕರು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ. ಎಲ್ಲರನ್ನೂ ಹಂತ ಹಂತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಡಿಕೆಶಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆ

ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸತತವಾಗಿ ನಾಲ್ಕು ಬಾರಿ ಜೆಡಿಎಸ್‌ ಪಕ್ಷದಿಂದ ಶ್ರೀನಿವಾಸ್‌ ಆಯ್ಕೆಯಾಗಿದ್ದರು. ತಿಂಗಳುಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಮ್ಮ ನೂರಾರು ಬೆಂಬಲಿಗರೊಂದಿಗೆ ಇಂದು ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

Exit mobile version