Site icon PowerTV

ಉದ್ಘಾಟನೆಗೆ ಸಿದ್ದಗೊಂಡ ವಿಜಯಪುರ ವಿಮಾನ ನಿಲ್ದಾಣ : ಉದ್ಘಾಟನೆ ಯಾವಾಗ?

ಬೆಂಗಳೂರು : ವಿಜಯಪುರ ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದ ವಿಮಾನ ನಿಲ್ದಾಣ ಸದ್ಯ ನನಸಾಗುವ ಹಂತಕ್ಕೆ ಬಂದಿದೆ. ಈಗಾಗಲೇ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಶೀಘ್ರದಲ್ಲಿಯೇ ಲೋಕಾರ್ಪನೆಗೊಳ್ಳಲಿದೆ.

ಹೌದು, ವಿಜಯಪುರ ನಗರದ ಹೊರಭಾಗದ ಬುರಣಾಪುರ ಮತ್ತು ಮದಭಾವಿ ಗ್ರಾಮದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗೆ ಲಿಂಗೈಕ್ಯರಾದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಹೆಸರನ್ನು ವಿಜಯಪುರ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ, ಸರ್ಕಾರ ಬಸವೇಶ್ವರ ವಿಮಾನ ನಿಲ್ದಾಣ ಎಂದು ಹೆಸರಿಡಲು ಮುಂದಾಗಿದೆ.

ಗೋವಿಂದ ಕಾರಜೋಳ ಪರಿಶೀಲನೆ

ಸಚಿವ ಗೋವಿಂದ ಎಂ.ಕಾರಜೋಳ ಅವರು ವಿಜಯಪುರದ ಶ್ರೀ ಬಸವೇಶ್ವರ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಂಡು ವಿಜಯಪುರ ಜನತೆಗೆ ವಿಮಾನದಲ್ಲಿ ಸಂಚರಿಸುವ ಅವಕಾಶ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ

ವಿಜಯಪುರ ವಿಮಾನ ನಿಲ್ದಾಣದಿಂದ ಐತಿಹಾಸಿಕ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರಕಲಿದ್ದು, ತೋಟಗಾರಿಕೆ,ಕೈಗಾರಿಕೆ, ಸೇರಿದಂತೆ ಹಲವು ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ. ಇದರೊಂದಿಗೆ ಕೂಡಲ ಸಂಗಮ, ಆಲಮಟ್ಟಿ, ಕೊಲ್ಲಾಪುರ, ಸೊಲ್ಲಾಪುರ, ಹೀಗೆ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಲು ಈ ವಿಮಾನ ನಿಲ್ದಾಣ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಕಾರಜೋಳ ತಿಳಿಸಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಶಿಲಾನ್ಯಾಸ

ಇನ್ನೂ, 2008ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪನವರು ವಿಜಯಪುರ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ, ಕಾಮಗಾರಿ ಸಾಧ್ಯವಾಗಿರಲಿಲ್ಲ. ಬಳಿಕ 2021ರ ಫೆಬ್ರವರಿಯಲ್ಲಿ ಮತ್ತೆ ಬಿ.ಎಸ್ ಯಡಿಯೂರಪ್ಪನವರೇ ಶಿಲಾನ್ಯಾಸ ನೆರವೇರಿಸಿದ್ದರು.

Exit mobile version