Site icon PowerTV

ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ : ಪ್ರಕರಣ ದಾಖಲಿಸಲು ಮುಂದಾದ ಸಾವರ್ಕರ್ ಮೊಮ್ಮಗ

ಬೆಂಗಳೂರು : ಸದಾ ತಮ್ಮ ಭಾಷಣ ಹಾಗೂ ಹೇಳಿಕೆಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಕ್ಷಗಳ ಟೀಕಾ ಪ್ರಹಾರಕ್ಕೆ ಗುರಿಯಾಗುತ್ತಿದ್ದಾರೆ. ಮಾತಿನ ಭರದಲ್ಲಿ ರಾಹುಲ್ ಬಳಸುವ ವ್ಯಕ್ತಿಗಳ ಹೆಸರುಗಳು ಅವರನ್ನೇ ಸಂಕಷ್ಟಕ್ಕೆ ದೂಡುತ್ತಿದೆ.

ಹೌದು, ತನ್ನ ಸಂಸದ ಸ್ಥಾನ ಅನರ್ಹಗೊಂಡ ಹಿನ್ನೆಲೆಯಲ್ಲಿ ಮಾಧ್ಯಮಗಳಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ‘ನನ್ನ ಹೆಸರು ಸಾವರ್ಕರ್‌ ಅಲ್ಲ, ಗಾಂಧಿ. ಗಾಂಧಿ ಎಂದಿಗೂ ಕ್ಷಮೆ ಕೇಳುವುದಿಲ್ಲ’ ಎಂದು ಹೇಳಿದ್ದರು.

ಸಾವರ್ಕರ್ ಹೆಸರು ಬಳಕೆ ಮಾಡಿರುವುದರಿಂದ ರಾಹುಲ್‌ ಗಾಂಧಿ ವಿರುದ್ಧ ಹಿಂದೂ ರಾಷ್ಟ್ರವಾದಿ ವಿ.ಡಿ. ಸಾವರ್ಕರ್‌ ಅವರ ಮೊಮ್ಮಗ ಕಿಡಿಕಾರಿದ್ದಾರೆ. ತಮ್ಮ ತಾತ ಬ್ರಿಟೀಷರ ಬಳಿ ಕ್ಷಮೆ ಕೇಳಿದ್ದರು ಎಂಬುದನ್ನು ಸಾಬೀತು ಮಾಡಿ ಎಂದು ಸವಾಲು ಹಾಕಿದ್ದಾರೆ.

ಇದಲ್ಲದೆ, ವಿ.ಡಿ ಸಾವರ್ಕರ್ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೀಡಿದ ಹೇಳಿಕೆ ಬಗ್ಗೆ ದೂರು ದಾಖಲಿಸುವುದಾಗಿ, ರಂಜಿತ್‌ ಸಾವರ್ಕರ್‌ ಹೇಳಿದ್ದಾರೆ. ಅಲ್ಲದೇ ರಾಹುಲ್‌ ಗಾಂಧಿಯವರಿಗೆ ಕ್ಷಮಾಪಣೆ ಕೇಳಲು ಹೇಳಿ ಎಂದು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಅವರನ್ನು ಒತ್ತಾಯಿಸಿದ್ದಾರೆ.

ಸರ್ಕಾರಿ ಬಂಗಲೆ ಖಾಲಿ ಮಾಡುತ್ತೇನೆ

ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಸರ್ಕಾರಿ ಬಂಗಲೆ ತೆರವು ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯ ಹೌಸಿಂಗ್​ ಕಮಿಟಿ ನೋಟಿಸ್ ನೀಡಿತ್ತು. ಇದರ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ,12 ತುಘಲಕ್ ಲೇನ್‌ನಲ್ಲಿರುವ  ಸರ್ಕಾರಿ ಬಂಗಲೆ ಖಾಲಿ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.

ಲೋಕಸಭಾ ಸಚಿವಾಲಯದ ಆದೇಶಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಕಳೆದ 4 ಅವಧಿಗಳಲ್ಲಿ ಲೋಕಸಭೆಯ ಚುನಾಯಿತ ಸದಸ್ಯನಾಗಿದ್ದೇನೆ. ಇಲ್ಲಿ ಕಳೆದ ಸಮಯ, ಸಂತೋಷದ ನೆನಪುಗಳಿಗೆ ನಾನು ಋಣಿಯಾಗಿದ್ದೇನೆ. ಇಲ್ಲಿನ ಅನುಭವಕ್ಕೆ ಜನರ ಆಶೀರ್ವಾದವೇ ಆದೇಶವಾಗಿದೆ. ನನ್ನ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲ. ನಾನು ಖಂಡಿತವಾಗಿಯೂ ನಿಮ್ಮ ಪತ್ರದಲ್ಲಿನ ವಿವರಗಳಿಗೆ ಬದ್ಧನಾಗಿದ್ದೇನೆ ಎಂದು ಲೋಕಸಭಾ ಸಚಿವಾಲಯದ ಅಧಿಕಾರಿಗೆ ಮರು ಪತ್ರದ ಮೂಲಕ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.

Exit mobile version