Site icon PowerTV

ಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟ : ವೀರಶೈವ ಸಮಾಜ ಖಂಡನೆ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಶಿಕಾರಿಪುರದ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯನ್ನು ಶಿವಮೊಗ್ಗ ವೀರಶೈವ ಸಮಾಜದ ಮುಖಂಡರು ಖಂಡಿಸಿದ್ದಾರೆ. 

ಸೋಮವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್ ಅವರು, ಸಮಾಜದಲ್ಲಿ ಎಲ್ಲರಿಗೂ ಪ್ರತಿಭಟನೆ ನಡೆಸುವ ಹಕ್ಕಿದೆ. ಆದರೆ ಈ ರೀತಿ ಮನೆಯ ಮೇಲೆ ದಾಳಿ ನಡೆಸುವುದು ಖಂಡನೀಯ. ಅವರು ಈ ಘಟನೆ ಕುರಿತು ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಮನೆಯಲ್ಲಿ ಹೆಣ್ಣು‌ ಮಕ್ಕಳೆ ಇದ್ದಾಗ ಈ ರೀತಿ ಕಲ್ಲು ತೂರಾಟ, ಚಪ್ಪಲಿ ತೂರಾಟ ಮಾಡಿರುವುದು ವೀರಶೈವ ಸಮಾಜ ಖಂಡಿಸುತ್ತದೆ. ನಾವು ಅವರ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಅವರು ಜಿಲ್ಲಾಧಿಕಾರಿ ಕಚೇರಿ ಅಥವಾ ವಿಧಾನಸೌಧ ಮುತ್ತಿಗೆ ಹಾಕಲಿ ನಮ್ಮ ಅಭ್ಯಂತರವಿಲ್ಲ. ಆದರೆ ಈ ರೀತಿ‌ ಮನೆಯ ಮೇಲೆ ದಾಳಿ‌ ನಡೆಸಿರುವುದನ್ನು ನಮ್ಮ ಸಮಾಜ ಖಂಡಿಸುತ್ತದೆ ಎಂದಿದ್ದಾರೆ.

ವೀರಶೈವ ಸಮಾಜದ ಯುವ ಮುಖಂಡ ರಾಜು‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡುವುದು ಎಷ್ಟು ಸರಿ. ಪ್ರತಿಭಟನೆ ನಡೆಸಲು ಜಿಲ್ಲಾಧಿಕಾರಿಗಳ ಕಚೇರಿ, ತಾಲೂಕು ಕಚೇರಿ ಇದೆ. ಆದರೆ, ಈ ರೀತಿ ಮನೆ ಮುಂದೆ ಹೋಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಮನೆ ಮೇಲೆ‌ ದಾಳಿಯ ವಿಚಾರದಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

ಘಟನೆಯಿಂದ ಮನಸ್ಸಿಗೆ ನೋವಾಗಿದೆ : ಬಿಎಸ್ ವೈ

ಒಳಮೀಸಲಾತಿ ವಿಚಾರವಾಗಿ ಬಂಜಾರ ಸಮುದಾಯದ ಪ್ರತಿಭಟನೆ ವೇಳೆ ಶಿಕಾರಿಪುರದ ನಿವಾಸಕ್ಕೆ ಕಲ್ಲು ತೂರಾಟ ಮಾಡಿದ ಘಟನೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿ ವಿಚಾರವಾಗಿ ಬಂಜಾರ ಸಮುದಾಯದ ಪ್ರತಿಭಟನೆ ವೇಳೆ ಶಿಕಾರಿಪುರದ ನಿವಾಸಕ್ಕೆ ಕಲ್ಲು ತೂರಾಟ ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದೆ. ಯಾರ ಬಗ್ಗೆಯೂ ಆರೋಪ ಮಾಡಲ್ಲ. ಯಾರದೇ ಕೈವಾಡ ‌ಇಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

Exit mobile version