Site icon PowerTV

ರಸ್ತೆ ಅಪಘಾತ : ಆಂಬ್ಯುಲೆನ್ಸ್ ನಲ್ಲಿ ಮಲಗಿಕೊಂಡೇ ಪರೀಕ್ಷೆ ಬರೆದ ವಿದ್ಯಾರ್ಥಿನಿ

ಬೆಂಗಳೂರು : ಇತ್ತೀಚೆಗೆ ಆಸ್ಪತ್ರೆಯಲ್ಲಿಯೇ ಕುಳಿತು ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆದಿದ್ದ ಸುದ್ದಿ ವೈರಲ್ ಆಗಿತ್ತು . ಇದೀಗ, ಅಂಥದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ.

ಹೌದು, 10ನೇ (ಎಸ್ಸೆಸ್ಸೆಲ್ಸಿ) ತರಗತಿಯ ವಿದ್ಯಾರ್ಥಿನಿಯೊಬ್ಬಳು ಆಂಬ್ಯುಲೆನ್ಸ್‌ನಲ್ಲಿ ಮಲಗಿಕೊಂಡು ಪರೀಕ್ಷೆ ಬರೆದಿರುವ ಘಟನೆ ಮುಂಬಯಿಯ ಬಾಂದ್ರಾದಲ್ಲಿ ನಡೆದಿದೆ.

ಅಂಜುಮನ್-ಐ-ಇಸ್ಲಾಂ ಶಾಲೆಯ ವಿದ್ಯಾರ್ಥಿನಿ ಮುಬಾಶಿರಾ ಸಾದಿಕ್ ಸಯ್ಯದ್​​ ಒಂದು ಪರೀಕ್ಷೆ ಬರೆದು ಮುಗಿಸಿ ಬರುತ್ತಿದ್ದರು. ದುರಾದೃಷ್ಟವಶಾತ್ ರಸ್ತೆ ದಾಟುತ್ತಿದ್ದಾಗ ಅಪಘಾತಕ್ಕೀಡಾಗಿದ್ದಳು. ಆಕೆಗೆ ಕಾರು ಡಿಕ್ಕಿ ಹೊಡೆದು, ಆಕೆಯ ಎಡ ಪಾದಕ್ಕೆ ಗಂಭೀರವಾದ ಗಾಯಗಳಾಗಿದ್ದವು.

ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ

ಹೀಗಾಗಿ, ಅದೇ ದಿನ ಮುಬಾಶಿರಾ ಸಾದಿಕ್ ಸಯ್ಯದ್ ಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಮುಬಾಶಿರಾ ಶಸ್ತ್ರಚಿಕಿತ್ಸೆಗೂ ಮುನ್ನವೇ ಮುಂಬರುವ ಪರೀಕ್ಷೆಯನ್ನು ನಾನು ಬರೆಯಲೇಬೇಕು ಎಂದು ಶಾಲಾ ಶಿಕ್ಷಕರಿಗೆ ಹೇಳಿದ್ದರು.

ಶಿಕ್ಷಣ ಇಲಾಖೆ ಸಹಕಾರ

ವಿದ್ಯಾರ್ಥಿನಿ ಮನವಿ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಶಿಕ್ಷಣಾಧಿಕರಿಗಳ ಜೊತೆ ಚರ್ಚೆ ನಡೆಸಿತ್ತು. ವಿದ್ಯಾರ್ಥಿನಿಗೆ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಇದೀಗ ವಿದ್ಯಾರ್ಥಿನಿ ಬದ್ಧತೆ ಹಾಗೂ ಶಿಕ್ಷಣ ಇಲಾಖೆ ಸಹಕಾರಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಇನ್ನೂ ಮುಬಾಶಿರಾ ಸಾದಿಕ್ ಸಯ್ಯದ್ ಅವರು ಮುಂದಿನ ಪರೀಕ್ಷೆಯನ್ನು ಆಂಬ್ಯುಲೆನ್ಸ್ ನಲ್ಲೇ ಮಲಗಿಕೊಂಡು ಬರೆಯಲಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

Exit mobile version