Site icon PowerTV

ಬಿಎಸ್ ವೈ ವಿಸರ್ಜನಾ ಮೂರ್ತಿಯಾದ್ರೆ? : ಕಾಂಗ್ರೆಸ್ ಲೇವಡಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು ಎಂದು ನಿರ್ಧಾರ ಮಾಡುವುದು ಪಕ್ಷವೇ ಹೊರೆತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಅಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ಅಸ್ತ್ರವನ್ನಾಗಿ ಬಳಸಿಕೊಂಡಿದೆ.

ಸಿ.ಟಿ ರವಿ ಹೇಳಿಕೆಯನ್ನೇ ಬಳಸಿಕೊಂಡು, ‘ಉತ್ಸವ ಮೂರ್ತಿಯಾಗಿದ್ದ ಬಿ.ಎಸ್ ಯಡಿಯೂರಪ್ಪನವರು, ವಿಸರ್ಜನಾ ಮೂರ್ತಿಯಾದರೇ? ಎಂದು ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಸಿ.ಟಿ ರವಿ ಅವರ ಹೇಳಿಕೆಯ ವರದಿಯ ಪ್ರತಿಯನ್ನು ಟ್ವೀಟ್‌ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್‌, ಯಡಿಯೂರಪ್ಪನವರ ಸ್ಥಾನ ಮತ್ತು ಮಾನ ಎರಡನ್ನೂ ಬಿಜೆಪಿ ಕಾಲ ಕಸದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದೆ.

ಬಿಎಸ್‌ವೈ ಮುಕ್ತ ಬಿಜೆಪಿ?

ಯಡಿಯೂರಪ್ಪನವರ ಸ್ಥಾನ ಮತ್ತು ಮಾನ ಎರಡನ್ನೂ ಕಾಲ ಕೆಳಗಿನ ಕಸದಂತೆ ಕಾಣುತ್ತಿದೆ ಬಿಜೆಪಿ. ಟಿಕೆಟ್ ನಿರ್ಧರಿಸುವ ಹಕ್ಕು, ಸ್ವತಂತ್ರ ಯಡಿಯೂರಪ್ಪ ಅವರಿಗಿಲ್ಲ ಎನ್ನುವ ಮೂಲಕ ಬಿಎಸ್‌ವೈ ಮುಕ್ತ ಬಿಜೆಪಿ ಅಭಿಯಾನವನ್ನು ಸಿ.ಟಿ ರವಿ ಅಧಿಕೃತಗೊಳಿಸಿದ್ದಾರೆ ಎಂದು ಕುಟುಕಿದೆ.

ಲಿಂಗಾಯತರ ಮತಕ್ಕಾಗಿ ಉತ್ಸವ ಮೂರ್ತಿಯಾಗಿದ್ದ ಬಿಎಸ್‌ವೈ ಇಷ್ಟು ಬೇಗ ವಿಸರ್ಜನಾ ಮೂರ್ತಿಯಾದರೆ? ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

Exit mobile version