Site icon PowerTV

ವಿಧಾನಸಭಾ ಚುನಾವಣೆ : ಬಿಜೆಪಿ ಸ್ಟ್ರಾಟರ್ಜಿ ಬಗ್ಗೆ ಬಾಯಿ ಬಿಟ್ಟ ಸಿಎಂ ಬೊಮ್ಮಾಯಿ

ಬೆಂಗಳೂರು : ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಅನುಷ್ಠಾನಗೊಳ್ಳುವುದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಗ್ಯಾರೆಂಟಿ ಕಾರ್ಡ್ ಯೋಜನೆ ಕೇವಲ ಜನರನ್ನು ಮರಳು ಮಾಡುವ ಕೆಲಸವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ, ಬಿಜೆಪಿ ಪಕ್ಷ ಸಂಘಟನೆಯಲ್ಲಿ ಗಟ್ಟಿಯಾಗಿದೆ. ಪಕ್ಷದ ಕಾರ್ಯಕರ್ತರಲ್ಲಿ ಬಹಳಷ್ಟು ಉತ್ಸಾಹವಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆಯುವ ಆತ್ಮವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯಕ್ಕೆ ಕೇಂದ್ರ ನಾಯಕರ ಎಂಟ್ರಿ

ಗೆಲ್ಲುವ  ಪಕ್ಷಕ್ಕೆ ಪೈಪೋಟಿ ಇದ್ದೇ ಇರುತ್ತದೆ. ಈ ಪೈಪೋಟಿಯಲ್ಲಿ ಪಕ್ಷ, ಹೈಕಮಾಂಡ್ ಸಮರ್ಥವಾಗಿ ನಿಭಾಯಿಸಲಿದೆ. ಹೈಕಮಾಂಡ್ ಟಿಕೆಟ್ ನೀಡುವ ಸ್ಪರ್ಧಿಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ. ಕೇಂದ್ರದ ಹಲವಾರು ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅಸ್ಸಾಂ, ಮಧ್ಯಪ್ರದೇಶ ಮುಖ್ಯಮಂತ್ರಿಗಳು ಅಲ್ಲದೇ ಹಲವು ಕೇಂದ್ರ ಸಚಿವರು ಭೇಟಿ ನೀಡಲಿದ್ದಾರೆ ಎನ್ನುವ ಮೂಲಕ ಕೇಂದ್ರದ ನಾಯಕರ ಪ್ರಭಾವ ಬಳಸುವುದಾಗಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ : ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಿ

ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆಗೆ ಎಂಇಎಸ್ ನವರಿಗೆ ಪೂಜೆ ಮಾಡಲು ಅವಕಾಶ ನೀಡಲಾಗುವುದೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಈ ವಿಷಯದ ಬಗ್ಗೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಕೇಸರಿ ಪಡೆಯಿಂದ ಸರಣಿ ಕಾರ್ಯಕ್ರಮ

ಬಿಜೆಪಿಯ ವಿವಿಧ ಮೋರ್ಚಾ, ಸಮ್ಮೇಳನ , ಬೂತ್ ಮಟ್ಟದ ವಿಜಯ ಸಂಕಲ್ಪ ಯಾತ್ರೆ, ಫಲಾನುಭವಿಗಳ ಕಾರ್ಯಕ್ರಮ, ರಥಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಿರಂತರವಾಗಿ ರಾಜ್ಯದಲ್ಲಿ ನಡೆಯುತ್ತಿದೆ. ಇದು ಮುಂದಿನ ಚುನಾವಣೆ ಫಲಿತಾಂಶದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂದು ಕಾದುನೋಡಬೇಕಿದೆ.

Exit mobile version