ಬೆಂಗಳೂರು : ಕಾಂಗ್ರೆಸ್ ಮೋದಿಯ ಸಮಾಧಿ ಅಗೆಯಲು ಕನಸು ಕಾಣುತ್ತಿದೆ. ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡದಲ್ಲಿ ನೀಡಿದ್ದ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವ್ಯಾರೂ ಪ್ರಧಾನಿ ನರೇಂದ್ರ ಮೋದಿ ಸಾವು ಬಯಸುವುದಿಲ್ಲ, ಅವರು 125 ವರ್ಷ ಕಾಲ ಆರೋಗ್ಯವಂತರಾಗಿ ಬಾಳಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೋದಿ ಶತಾಯುಷಿಯಾಗಬೇಕು
ಪ್ರಧಾನಿ ಮೋದಿಯವರು ಶತಾಯುಷಿಯಾಗಬೇಕು ಎಂಬುದು ನಮ್ಮೆಲ್ಲರ ಆಸೆ. ಆದರೆ, ಸಚಿವ ಅಶ್ವಥನಾರಾಯಣ ಅವರು, ಟಿಪ್ಪುವನ್ನು ಮುಗಿಸಿದಂತೆ ಸಿದ್ದರಾಮಯ್ಯರನ್ನು ಮುಗಿಸಬೇಕು ಎಂದು ಹೇಳಿದ್ದರು. ಮೋದಿ ಜವಾಬ್ದಾರಿಯುತ ಪ್ರಧಾನಿಯಾಗಿದ್ದರೆ, ಅಶ್ವತ್ಥನಾರಾಯಣರನ್ನು ಕರೆಸಿ, ಸಚಿವ ಸ್ಥಾನದಿಂದ ವಜಾ ಮಾಡಬೇಕಿತ್ತು ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಪ್ರಜೆಗಳ ಹಿತ ಮರೆತು ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಬಿಜೆಪಿಯ ಅನೈತಿಕ ಸರ್ಕಾರವನ್ನು ಕಿತ್ತಸೆದು ಜನಪರವಾದ ಕಾಂಗ್ರೆಸ್ ಸರ್ಕಾರ ರಚನೆಗೆ ಕೈಜೋಡಿಸಿ ಎಂದು ಜನರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮೋದಿ ಅವರನ್ನು ಮುಗಿಸಿ..
ಇತ್ತ, ಪ್ರತಿಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಿರುವ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಸುಖ್ವಿಂದರ್ ಸಿಂಗ್ ಅವರು, ನಿಮ್ಮ ಜಗಳವನ್ನು ಮುಗಿಸಬೇಕು. ಪ್ರಧಾನಿ ಮೋದಿ ಅವರನ್ನು ಕೊನೆಗಾಣಿಸುವಂತೆ ಯೋಚನೆ ಮಾಡಬೇಕು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಗಿಸಿದರೆ ಭಾರತ ಉದ್ದಾರವಾಗುತ್ತದೆ. ಮೋದಿ ಅವರಿಗೆ ದೇಶಭಕ್ತಿಯ ಅರ್ಥವೇ ಗೊತ್ತಿಲ್ಲ. ಮೋದಿಯನ್ನು ಮುಗಿಸಿದರೆ ಅದಾನಿಯೂ ಕೊನೆಯಾಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
