Site icon PowerTV

ಗಡಿ & ನದಿಗಳ ರಕ್ಷಣಾ ಆಯೋಗಕ್ಕೆ ಅಧ್ಯಕ್ಷರ ನೇಮಕ

ಬೆಳಗಾವಿ : ಸುಪ್ರೀಂ ಕೋರ್ಟ್​​​ನಲ್ಲಿ ಮಹಾರಾಷ್ಟ್ರ ಸರ್ಕಾರ ಖ್ಯಾತೆ ತೆಗೆದಿರುವ ಬೆಳಗಾವಿ ಗಡಿ ವಿವಾದದ ಅಂತಿಮ ವಿಚಾರಣೆ ನಡೆಯಲು ಮುಹೂರ್ತ ನಿಗದಿಯಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡ ಕರ್ನಾಟಕ ರಾಜ್ಯ ಸರ್ಕಾರ ಹಲವಾರು ತಿಂಗಳುಗಳಿಂದ ಖಾಲಿ ಉಳಿದಿದ್ದ ಗಡಿ ಮತ್ತು ನದಿಗಳ ರಕ್ಷಣಾ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್​​ನ ಹಿರಿಯ ನಿವೃತ್ತ ನ್ಯಾಯಮೂರ್ತಿ ಶಿವರಾಜ್​​ ಬಿ ಪಟೇಲ್​​​ ಅವರನ್ನು ರಾಜ್ಯದ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ನ್ಯಾ. ಶಿವರಾಜ್​​ ಪಟೇಲ್​ ಅವರು ಈ ಹಿಂದೆ BJP ಸರ್ಕಾರದ ಅವಧಿಯಲ್ಲಿಯೇ ರಾಜ್ಯದ ಲೋಕಾಯುಕ್ತರಾಗಿಯೂ ಅಲ್ಪ ಅವಧಿಗೆ ಸೇವೆ ಸಲ್ಲಿಸಿದ್ದರು.

ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಹೈಕೋರ್ಟ್​​​​ನ ನಿವೃತ್ತ ನ್ಯಾಯಮೂರ್ತಿ K.L ಮಂಜುನಾಥ್​​​ ನೇಮಕಗೊಂಡಿದ್ದರು. ಅವರ ನಿಧನದ ನಂತರ ಕಳೆದ 10 ತಿಂಗಳಿಂದ ಗಡಿ ಆಯೋಗಕ್ಕೆ ಅಧ್ಯಕ್ಷರ ನೇಮಕ ನಡೆಯದೇ ಹುದ್ದೆ ಖಾಲಿ ಉಳಿದಿತ್ತು. ಬೆಳಗಾವಿ ಗಡಿ ವಿವಾದ ಸೇರಿದಂತೆ ರಾಜ್ಯದ ಗಡಿ ವಿವಾದಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲು ಗಡಿ ಆಯೋಗವನ್ನು 2018ರ ವೇಳೆಯಲ್ಲಿ ರಚಿಸಲಾಗಿತ್ತು.

Exit mobile version