Site icon PowerTV

ಮೋದಿ ಮಾತಾಡಿದರೆ ರೈತರ ಪ್ರಾಣ ಉಳಿಯುತ್ತಿತ್ತು : ರಾಹುಲ್‌ ಗಾಂಧಿ

ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದರೆ 733 ಜೀವಗಳನ್ನು ಉಳಿಸಬಹುದಿತ್ತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿಷಾಧ ವ್ಯಕ್ತಪಡಿಸಿದರು.

ಭಾರತ್‌ ಜೋಡೊ ಯಾತ್ರೆಯ ಭಾಗವಾಗಿ ಬುಲ್ಢಾಣಾ ಜಿಲ್ಲೆಯ ಭಸ್ತಾನ್ ಗ್ರಾಮದಲ್ಲಿ ರಾಹುಲ್‌ ಗಾಂಧಿ ಮಾತನಾಡಿದರು. ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಸುದೀರ್ಘ ಕಾಲ ನಡೆಸಿದ ಚಳವಳಿ ವೇಳೆ ಮೃತಪಟ್ಟ ರೈತರಿಗೆ ಸಂತಾಪ ವ್ಯಕ್ತಪಡಿಸಿದರು. ರೈತರು ಈ ರಾಷ್ಟ್ರದ ಧ್ವನಿಯಾಗಿದ್ದಾರೆ. ಕೃಷಿ ಕಾಯ್ದೆಗಳು ರೈತರ ವಿರೋಧಿಯಾಗಿದ್ದವು. ಹಾಗಾಗಿ ಅವರು ದೆಹಲಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಿದರು. ಕೃಷಿ ಕಾಯ್ದೆಗಳನು ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವಂತವುಗಳಾಗಿದ್ದವು ಎಂದು ರಾಹುಲ್‌ ಗಾಂಧಿ ಹೇಳಿದರು. ಕೇಂದ್ರ ಸರ್ಕಾರಕ್ಕೆ ಪೊಲೀಸರಿದ್ದಾರೆ, ಶಸ್ತ್ರಾಸ್ತ್ರಗಳಿವೆ, ಆಡಳಿತದ ಅಧಿಕಾರವಿದೆ. ಆದರೆ ರೈತರಿಗೆ ಕೇವಲ ಅವರ ಧ್ವನಿಯಿದೆ. ಈ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಚಳವಳಿ ಸಂದರ್ಭ 733 ರೈತರು ಪ್ರಾಣ ಕಳೆದುಕೊಂಡರು ಎಂದು ಬೇಸರಿಸಿದರು. ರಾಹುಲ್‌ ಗಾಂಧಿ ಅವರು ಭಾಷಣವನ್ನು ಕೊನೆಗೊಳಿಸುತ್ತಿದ್ದಂತೆ ಸಭೆಯಲ್ಲಿದ್ದ ಎಲ್ಲರೂ ಎದ್ದು ನಿಂತು ಮೃತ ರೈತರಿಗೆ ಸಂತಾಪ ಸೂಚಿದರು.

Exit mobile version