Site icon PowerTV

ಶಬರಿಮಲೈಗಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮುಷ್ಟಿ ಅಕ್ಕಿ ಅಭಿಯಾನ

ಶಿವಮೊಗ್ಗ: ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ(ಎಸ್‍ಎಎಎಸ್) ಶಿವಮೊಗ್ಗ ಘಟಕದ ವತಿಯಿಂದ ಶಬರಿಮಲೈ ಸನ್ನಿಧಾನದಲ್ಲಿ ನೀಡುವ ಅನ್ನದಾನಕ್ಕಾಗಿ ಮುಷ್ಟಿ ಅಕ್ಕಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅನ್ನದಾನ ಸಮಿತಿ ಸದಸ್ಯ ಕೆ.ಈ. ಕಾಂತೇಶ್ ತಿಳಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ಎಸ್‍ಎಎಎಸ್ ಸಂಘಟನೆಯು ಕಳೆದ 18 ವರ್ಷಗಳಿಂದ ರಾಷ್ಟ್ರಾದ್ಯಂತ ಧಾರ್ಮಿಕ ಸಾಮಾಜಿಕ ಸೇವೆ ಮಾಡುತ್ತಾ ಬಂದಿದೆ. ಇದರ ಮುಂದುವರಿದ ಭಾಗವಾಗಿ ಇದೆ ಮೊದಲ ಬಾರಿ ಶಿವಮೊಗ್ಗ ನಗರ ಘಟಕದ ವತಿಯಿಂದ ನಗರದ ಭಕ್ತಾದಿಗಳಿಂದ ಕನಿಷ್ಟ ಒಂದು ಮುಷ್ಟಿ ಅಕ್ಕಿಯನ್ನು ಸಂಗ್ರಹಿಸಿ ಶಬರಿಮಲೈ ಸನ್ನಿಧಾನದ ಅನ್ನದಾನಕ್ಕಾಗಿ ಕಳಿಸಿಕೊಡಲಾಗುವುದು ಎಂದರು.

ಈ ಕಾರ್ಯ ನ. 16 ರಿಂದ 20 ರವರೆಗೆ ನಗರದಾದ್ಯಂತ ಅಯ್ಯಪ್ಪ ರಥ ಸಂಚರಿಸಲಿದ್ದು, ಈ ರಥದಲ್ಲಿ ಅಕ್ಕಿ, ಬೇಳೆ, ಕಾಳು ಅಡಿಗೆ ಎಣ್ಣೆ ಸಂಗ್ರಹ ಅಭಿಯಾನ ನಡೆಯಲಿದೆ. ಅಯ್ಯಪ್ಪ ರಥಕ್ಕೆ ನ. 16ರಂದು ಬೆಳಿಗ್ಗೆ 8-30ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕಿನ ದೇವಸ್ಥಾನದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಲಿದ್ದಾರೆ.

ಈ ಸಂಗ್ರಹ ಕಾರ್ಯದ ಬಳಿಕ ಒಟ್ಟು ಧವಸ-ಧಾನ್ಯಗಳನ್ನು ಶಬರಿಮಲೈ ದೇವಸ್ಥಾನಕ್ಕೆ ಕಳಿಸಿಕೊಡಲಾಗುವುದು. ಇದರ ಅಂಗವಾಗಿ ಡಿ.16ರಂದು ಶುಭಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ಸಾರ್ವಜನಿಕ ಪಡಿಪೂಜೆ ಹಾಗೂ ಮಹಾಶಕ್ತಿ ಪೂಜೆ ಕಾರ್ಯಕ್ರಮ ಜರುಗಲಿದೆ ಎಂದು ಕಾಂತೇಶ್ ತಿಳಿಸಿದ್ದಾರೆ.

Exit mobile version