Site icon PowerTV

ಅನ್ಯ ಜಾತಿಯ ಯುವಕನನ್ನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಹತ್ಯೆ ಮಾಡಿದ ತಂದೆ

ಬಳ್ಳಾರಿ : ಎಂಟನೇ ತರಗತಿಯಲ್ಲಿ ಓದುತ್ತಿದ್ದ ಮಗಳು ಅ‌ನ್ಯ ಜಾತಿ ಯುವಕನನ್ನು ಪ್ರೀತಿಸುತ್ತಿದ್ದಾಳೆಂದು ಶಂಕಿಸಿ ತಂದೆಯೇ ಆಕೆಯನ್ನು ಕುಡುತಿನಿಯ ಸಿದ್ದಮ್ಮನಹಳ್ಳಿ ಬಳಿ ತುಂಗಭದ್ರ ಎಚ್‌ಎಲ್‌ಸಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎನ್ನಲಾದ ಘಟನೆ ತಡವಾಗಿ ಬಯಲಾಗಿದೆ.

ಮಧ್ಯಾಹ್ನ ಮಗಳನ್ನು ಸಿನಿಮಾ ತೋರಿಸುವುದಾಗಿ ಪುಸಲಾಯಿಸಿ ಓಂಕಾರಗೌಡ ಬೈಕ್‌ನಲ್ಲಿ ಮನೆಯಿಂದ ಕರೆದೊಯ್ದ. ಚಿತ್ರಮಂದಿರದ ಬಳಿ ಹೋದಾಗ ಸಿನಿಮಾ ಆರಂಭವಾಗಿತ್ತು. ಅಲ್ಲಿಂದ ಹೊಟೇಲ್‌ಗೆ ಕರೆದೊ‌ಯ್ದು ತಿಂಡಿ ತಿನ್ನಿಸಿ, ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿದ. ಆಭರಣದ ಅಂಗಡಿಯಲ್ಲಿ ಒಂದು ಜತೆ ಓಲೆ, ಉಂಗುರವನ್ನು ಮಗಳಿಗೆ ಕೊಡಿಸಿದ. ಆರೋಪಿ ವಿಚಾರಣೆ ಸಮಯದಲ್ಲಿ ಈ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ.

ಇನ್ನು, ಊರಿಗೆ ಹಿಂತಿರುಗುವ ಹೊತ್ತಿಗೆ ರಾತ್ರಿಯಾಗಿತ್ತು. ಎಚ್‌ಎಲ್‌ಸಿ ಕಾಲುವೆ ಬಳಿಗೆ ಮಗಳ ಕರೆತಂದು,’ಸ್ವಲ್ಪ ಹೊತ್ತು ಇಲ್ಲೇ ನಿಂತಿರು. ಕೆಲಸವಿದೆ ಮುಗಿಸಿ ಬರುತ್ತೇನೆ‘ಎಂದು ಹೇಳಿ ತಂದೆ ಕಣ್ಮರೆಯಾದ. ಆನಂತರ ಹಿಂದಿನಿಂದ ಬಂದು ಕಾಲುವೆಗೆ ತಳ್ಳಿದ. ಬಾಲಕಿ ಅಪ್ಪ, ಅಪ್ಪ ಎಂದು ಕೂಗಿ ನೀರಿನಲ್ಲಿ ಕೊಚ್ಚಿಕೊಂಡು ಹೋದಳು, ಆನಂತರ ಈತ ಬೈಕ್‌ ಅನ್ನು ತನ್ನ ಗೆಳೆಯ ಭೀಮಪ್ಪನ ಮನೆಯಲ್ಲಿ ಬಿಟ್ಟು ತಿರುಪತಿಗೆ ರೈಲು ಹತ್ತಿದ. ತಿರುಪತಿ ದರ್ಶನ ಮುಗಿಸಿ ವಾಪಸ್‌ ಬರುವಾಗ ಕೊಪ್ಪಳದ ಬಳಿ ಓಂಕಾರಗೌಡನನ್ನು ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.

ಭೀಮಪ್ಪ ಬಾಲಕಿಯ ಕೊಲೆಗೆ ಸಹಕಾರ ನೀಡಿದ್ದಾನೆ. ಆರೋಪಿಯು ಮಗಳ ಹೆಸರಿನಲ್ಲಿ ₹ 20 ಲಕ್ಷ ಬ್ಯಾಂಕಿನಲ್ಲಿ ಇಟ್ಟಿದ್ದ ಕೊಲೆ ಮಾಡುವ ಮೊದಲು ಅದನ್ನು ಆರೋಪಿ ಗೆಳೆಯನ ಸಹಾಯದಿಂದ ವರ್ಗಾವಣೆ ಮಾಡಿಕೊಂಡಿದ್ದ ಎಂಬ ಸಂಗತಿಯೂ ವಿಚಾರಣೆಯಿಂದ ಗೊತ್ತಾಗಿದೆ. ನವೆಂಬರ್‌ 1ರಂದು ಬಾಲಕಿ ತಾಯಿ ಗಂಡ ಹಾಗೂ ಪುತ್ರಿ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈಗ ಅದನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ. ಬಾಲಕಿ ಶವಕ್ಕಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

Exit mobile version