Site icon PowerTV

2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗಳಿಸುವುದು ಖಚಿತ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗಳಿಸುವುದು ಖಚಿತ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ನಗರದ ಹರ್ಷ ದಿ ಫರ್ನ್ ಹೋಟೆಲ್ ನಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡದ ಬಿಜೆಪಿ ವಿಭಾಗ ಮಟ್ಟದ ಸಭೆ ಉದ್ಘಾಟಿಸಿ ಮಾತನಾಡಿ ಅವರು, ಕಳೆದ ಬಾರಿ ಈ ಮೂರೂ ಜಿಲ್ಲೆಯಲ್ಲಿ ಶೃಂಗೇರಿ, ಭದ್ರಾವತಿ, ಹಳಿಯಾಳ ಕ್ಷೇತ್ರಗಳಲ್ಲಿ ಸೋತಿದ್ದೆವು. ಈ ಬಾರಿ ಆ ಮೂರೂ ಕ್ಷೇತ್ರಗಳನ್ನು ಕೂಡ ಗೆಲ್ಲಬೇಕು. ನಮ್ಮ ನಮ್ಮ ಕ್ಷೇತ್ರಗಳಲ್ಲಿ ಬಿಜೆಪಿ ಯಾವ ರೀತಿಯಲ್ಲಿ ಸಂಘಟನೆಯಾಗಿದೆ. ಏನೇನು ಅಭಿವೃದ್ಧಿಗಳಾಗಿವೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಯಶಸ್ವಿಯಾಗಿ ಜನರಿಗೆ ಮನದಟ್ಟು ಮಾಡಬೇಕು ಎಂದರು.

ಪಕ್ಷದ ಸಿದ್ಧಾಂತ, ಸಂಘಟನೆ ಮತ್ತು ನಾಯಕತ್ವವನ್ನು ಜನ ಗುರುತಿಸಿ ಬಿಜೆಪಿ ಕಡೆಗೆ ಆಕರ್ಷಿತರಾಗುತ್ತಾರೆ. ಅಯೋಧ್ಯೆ, ಮಥುರಾ, ಕಾಶಿ ಭಾರತೀಯರ ಕನಸು ಈಗ ನನಸಾಗುತ್ತಿದೆ. ಅಯೋಧ್ಯೆಯಲ್ಲಿ ಭವ್ಯ ಮಂದಿರ ಕಟ್ಟುತ್ತಿದ್ದಾರೆ. ಮಥುರಾ, ಕಾಶಿ ಕೂಡ ವಿಮುಕ್ತವಾಗಿ ಕೋಟ್ಯಂತರ ಭಾರತೀಯರ ಕನಸು ನನಸಾಗಲಿದೆ. ದೇಶ ಭಕ್ತಿ ಎಂಬ ಭಾವನೆ ಬಂದಾಗ ಎಲ್ಲರೂ ಒಟ್ಟಾಗಿ ಪಕ್ಷ ಬೇಧ ಮರೆತು ಬಿಜೆಪಿ ಬೆಂಬಲಿಸುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಆದಾಗ ಇಡೀ ವಿಶ್ವವೇ ಪ್ರಧಾನಿ ಮೋದಿ ಜೊತೆಗೆ ನಿಂತಿತ್ತು. ಈಗ ಜನ ಬಿಜೆಪಿಯವರು ರಾಷ್ಟ್ರವಾದಿಗಳು. ಕಾಂಗ್ರೆಸ್ ನವರೇ ಕೋಮುವಾದಿಗಳು ಎಂದು ತೀರ್ಮಾನಿಸಿದ್ದಾರೆ ಎಂದರು.

ಭಾರತ, ಪಾಕಿಸ್ತಾನ ಎಂದು ವಿಂಗಡಿಸಿ ಹಿಂದೂಗಳ ಕಗ್ಗೊಲೆ ಮಾಡಿದವರು ಈಗ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಪಾಕಿಸ್ತಾನ ಹಸ್ಕೆ ಲೇಂಗೇ ಹಿಂದೂಸ್ತಾನ್ ಲಡ್ಕೇ ಲೇಂಗೇ ಎನ್ನುವವರಿಗೆ ಕಾಂಗ್ರೆಸ್ ಬೆಂಬಲಿಸಿತ್ತು. ಒಂದು ಕಡೆ ಸೈದ್ದಾಂತಿಕವಾಗಿ ಇನ್ನೊಂದೆಡೆ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯಿಂದ ಜನ ಒಪ್ಪಿದ್ದಾರೆ. ಸಂವಿಧಾನ ಮುರಿಯುವ ರಾಷ್ಟ್ರದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದೆ. ಇವತ್ತು ಎಲ್ಲಿ ಹೋದರೂ ಬಿಜೆಪಿಯ ಸಂಘಟನೆ ಸಿದ್ಧಾಂತ ಮತ್ತು ನಾಯಕತ್ವವನ್ನು ಜನ ಸ್ವಾಗತ ಮಾಡುತ್ತಿದ್ದು, 2023 ರ ವಿಧಾನಸಭೆ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಜಯಭೇರಿ ಬಾರಿಸಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲೂ 150 ಸ್ಥಾನ ಗೆಲ್ಲುವುದು ಖಚಿತ ಎಂದರು.

Exit mobile version