Site icon PowerTV

ದಿಢೀರ್ ಹವಾಮಾನ ಬದಲಾವಣೆ, ಹಲವರ ಆರೋಗ್ಯ ಏರುಪೇರು

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಬೆಳಗ್ಗೆಲ್ಲಾ ಚಳಿ ಚಳಿ, ಮಧ್ಯಾಹ್ನ ಆದ್ರೆ ಮೈಸುಡುವ ಬಿಸಿಲು,ಸಂಜೆಯಾದರೆ ದೋ ಎಂದು ಸುರಿಯುವ ಮಳೆಗೆ ಹೈರಾಣಾಗಿ, ಶಪಿಸುತ್ತ ಮನೆ ಸೇರುತ್ತಿದ್ದಾರೆ ಜನ.ಇನ್ನು ಈ ಬಿಸಿಲು, ಮಳೆ ಚಳಿಯಿಂದಾಗಿ ಬೆಂಗಳೂರಿನ ಜನ ಜ್ವರ, ಕೆಮ್ಮು, ನೆಗಡಿಗೆ ಬಳಲಿ ಆಸ್ಪತ್ರೆ ಬಾಗಿಲು ಬಡಿಯುತ್ತಿದ್ದಾರೆ.

ವಾಡಿಕೆಯಂತೆ ನವೆಂಬರ್‌ ಅಂತ್ಯದಿಂದ ಚಳಿಗಾಲ ಶುರುವಾಗುತ್ತದೆ. ಆದರೆ, ಈ ಬಾರಿ ವಾತಾವರಣ ಏರುಪೇರಿನಿಂದಾಗಿ ಮುಂಜಾನೆ ಚಳಿಯ ತೀವ್ರತೆ ಹೆಚ್ಚುತ್ತಿದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶದಲ್ಲಿ ಸಾಕಷ್ಟು ಏರಿಳಿತ ಉಂಟಾಗುತ್ತಿದೆ. ಬೆಳಗ್ಗಿನ ಹೊತ್ತು ಬಿಸಿಲು ಇದ್ದರೂ ಮಧ್ಯಾಹ್ನದವರೆಗೆ ವಾತಾವರಣ ಸ್ವಲ್ಪ ಮಟ್ಟಿಗೆ ತಣ್ಣಗಿರುತ್ತದೆ. ಆದರೆ, ಜನರಲ್ಲಿ ಜ್ವರ, ಶೀತ-ಕೆಮ್ಮು ಮುಂತಾದ ಸಾಂಕ್ರಾಮಿಕ ರೋಗಬಾಧೆಯ ಭೀತಿ ಎದುರಾಗಿದೆ.

ಹವಾಮಾನ ಬದಲಾವಣೆಯಿಂದ ಬ್ಯಾಕ್ಟೀರಿಯಾ, ವೈರಸ್‌ಗಳ ಬೆಳವಣಿಗೆ ಹೆಚ್ಚಾಗಿ ರೋಗನಿರೋಧಕ ಶಕ್ತಿ ಕುಂದುವ ಅಪಾಯವಿದೆ. ಇದರಿಂದಾಗಿ, ನಮಗೆ ನೆಗಡಿ, ಕೆಮ್ಮು, ಗಂಟಲು ನೋವು, ಉಸಿರಾಟದ ಸಮಸ್ಯೆ, ಮೂಗು ಕಟ್ಟುವಿಕೆ, ಎದೆಬಿಗಿತ, ಚರ್ಮ ಒಣಗುವಿಕೆ, ಅಲರ್ಜಿ, ಅಸ್ತಮಾ ಹೀಗೆ ವಿವಿಧ ಸಮಸ್ಯೆಗಳು ಹೆಚ್ಚಾಗಿ ಜನ ಆಸ್ಪತ್ರೆಗಳ ಕದ ತಟ್ಟುತ್ತಿದ್ದಾರೆ. ಇನ್ನು ಕ್ಲಿನಿಕ್‌ಗಳಲ್ಲಿ ಕೂಡ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

ದೊಡ್ಡವರಿಗಿಂತ ಮಕ್ಕಳಿಗೆ ವೈರಾಣು ಸೋಂಕು, ನೆಗಡಿ, ಶೀತ, ನ್ಯೂಮೋನಿಯಾ ಸಮಸ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಅನುಸರಿಸುವುದು ಮುಖ್ಯವಾಗಿದೆ. ಒಟ್ಟಿನಲ್ಲಿ ಮಳೆ, ಬಿಸಿಲು ಎರಡರಿಂದ ಬೇಸತ್ತಿದ್ದ ಬೆಂಗಳೂರು ಮಂದಿಗೆ, ಚಳಿ ಎಂಟ್ರಿ ಕೊಟ್ಟು ಮತ್ತೊಂದು ರೀತಿ ತಲೆ ನೋವಾಗಿ ಪರಿಣಮಿಸಿದೆ.ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಎಚ್ಚರಿಕೆಯಿಂದ ಇದ್ದರೆ ಅಪಾಯದಿಂದ ಪಾರಾಗಬಹುದು.

ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು

Exit mobile version