Site icon PowerTV

ಮಕ್ಕಳ ಬದುಕಿಗೆ ಕತ್ತಲಾದ ಬೆಳಕಿನ ಹಬ್ಬ..!

ಬೆಂಗಳೂರು :  ಎಲ್ಲರ ಬಾಳಲೂ ಬೆಳಕು ತರುವ ಹಬ್ಬ ದೀಪಾವಳಿ. ಕೆಲ ಮಕ್ಕಳ ಬಾಳಿನಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ಹಬ್ಬ ಆರಂಭವಾದಾಗಿನಿಂದ ಸುಮಾರು 13ಕ್ಕೂ ಹೆಚ್ಚು ಜನರು ಪಟಾಕಿಯಿಂದ ಗಾಯಗೊಂಡು ರಾಜಧಾನಿಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 3 ಪುಟ್ಟ ಮಕ್ಕಳಿಗೆ ಕಣ್ಣು ಬರುತ್ತದೋ ಇಲ್ಲವೋ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಇನ್ನೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ, ಈ ವರ್ಷ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಿಂಟೋ ಆಸ್ಪತ್ರೆಯ ಒಟ್ಟು 13 ಕೇಸ್​ನಲ್ಲಿ 3 ಕೇಸ್​ಗಳಿಗೆ ಕಣ್ಣು ಬರುತ್ತೆ ಅಂತ ಹೇಳೋದು ಕಷ್ಟವಾಗಿದೆ ಎಂದು ಮಿಂಟೋ ಆಸ್ಪತ್ರೆಯ ಸೂಪರಿಡೆಂಟ್​ ಡಾ. ಕಲ್ಪನಾ ತಿಳಿಸಿದ್ದಾರೆ.

ಪಟಾಕಿಯಿಂದ 19 ವರ್ಷದ ಸೂರ್ಯನಾರಾಯಣ್ ಎಂಬ ಯುವಕ ತನ್ನ ಕಣ್ಣಿನ ದೃಷ್ಟಿಯನ್ನೆ ಕಳೆದುಕೊಂಡಿದ್ದಾನೆ. ಮೂಲತಃ ತಮಿಳುನಾಡಿನ ಸೂರ್ಯನಾರಾಯನ್ ಹಬ್ಬದ ಆಚರಣೆಗಾಗಿ ಬೆಂಗಳೂರಿನ ಚಿಕ್ಕಮ್ಮನ ಮನೆಗೆ ಬಂದಿದ್ದ. ಆದ್ರೆ, ನಿನ್ನೆ ರಾತ್ರಿ ಪಟಾಕಿ ಸಿಡಿಸಲು ಹೋಗಿ ಕಣ್ಣಿನ ಗುಡ್ಡೆಗೆ ತೀವ್ರ ಗಾಯ ಮಾಡಿಕೊಂಡಿದ್ದಾನೆ. ಹೀಗಾಗಿ ಈತನ ದೃಷ್ಟಿ ವಾಪಸ್ ತರಲು ವೈದ್ಯರು ಹರಸಾಹಸಪಡುತ್ತಿದ್ದು, ಆಪರೇಶನ್ ಕೂಡ ನಡೆಸಿದ್ದಾರೆ.

ಇನ್ನೂ ಯಾರೋ ಸಿಡಿಸಿದ ಪಟಾಕಿಯಿಂದ ಈ ಬಾರಿ ಒಟ್ಟು 6 ಜನ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ.. ಇದರಲ್ಲಿ ಕೆಲವರು ದಾರಿಹೋಕರು, ಇನ್ನು ಕೆಲವರು ನಿಂತು ನೋಡುತ್ತಿದ್ದವರು ಎನ್ನಲಾಗಿದೆ.. ಇತ್ತ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಪಟಾಕಿ ಅವಘಡಕ್ಕೆ ಸಿಲುಕಿದ ಬಹುತೇಕರು ಪುರುಷರಾಗಿದ್ದಾರೆ. ಪುಟಾಣಿಗಳು ನರಳಾಡುತ್ತಿರೋ ಸ್ಥಿತಿ ನೋಡಿ ಎಂತವರಿಗೂ ಕರುಳು ಚುರುಕ್ ಅನ್ನುತ್ತಿದೆ.

ಒಟ್ಟಾರೆ ಪಟಾಕಿ ಸಿಡಿತದ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಾಗಿರೋದ್ರಿಂದ, ಈ ವಾರ ಪೂರ್ತಿ 24 ಗಂಟೆಗಳ ಯಾವುದೇ ತುರ್ತು ಚಿಕಿತ್ಸೆಗಳಿಗೆ ವೈದ್ಯರು ಸಿದ್ಧರಾಗಿದ್ದಾರೆ.

 ಸ್ವಾತಿ ಪುಲಗಂಟಿ, ಮೆಟ್ರೋ ಬ್ಯೂರೋ, ಪವರ್​ ಟಿವಿ

Exit mobile version