Site icon PowerTV

37 ಲಕ್ಷ ಕಾರ್ಮಿಕರಿಗೆ ಪಾಸ್ ವಿತರಿಸಲು KSRTC ಸನ್ನದ್ಧ..!

ಬೆಂಗಳೂರು : ರಾಜ್ಯಾದ್ಯಂತ ಗಗನಚುಂಬಿ ಕಟ್ಟಡಗಳು. ಸಾವಿರಾರು ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಇದಕ್ಕೆ ಕಾರಣ ಕಟ್ಟಡ ಕಾರ್ಮಿಕರು. ಆದ್ರೆ, ಇವ್ರ ಕಷ್ಟ ಕೇಳೋರು ಇಲ್ಲದಂತಾಗಿತ್ತು. ವಾರಕ್ಕೊಮ್ಮೆ ಸಂಬಳ ಕೊಡ್ತಾರೆ. ಕೊಡುವ ಹಣವೆಲ್ಲ ಮಾರನೇ ದಿನವೇ ಜೇಬಲ್ಲಿ ಖಾಲಿ ಖಾಲಿ. ತಿಂಗಳು ಪೂರ್ತಿ ಬಸ್ ನಲ್ಲಿ ಓಡಾಡಲು ತೊಂದರೆಯಾಗ್ತಿತ್ತು. ಅದಕ್ಕೆ ಈಗಾಗಲೇ ಬಿಎಂಟಿಸಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಫ್ರೀ ಪಾಸ್ ನೀಡಲಾಗ್ತಿದೆ. ಇದೀಗ, ಈ ಫ್ರೀ ಪಾಸ್ ರಾಜ್ಯಾದ್ಯಂತ ವಿತರಣೆ ಆಗಲಿದ್ದು, ರಾಜ್ಯದ 37 ಲಕ್ಷ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್​ ಪಾಸ್ ನೀಡಲು ನಿರ್ಧರಿಸಲಾಗಿದೆ.

ಪಾಸ್​ ಪಡೆಯೋದು ಹೇಗೆ..? 

ಫ್ರೀ ಪಾಸ್ ಪಡೆಯಲು ಎರಡು ಪೋಟೋ
ಕಾರ್ಮಿಕ ಇಲಾಖೆ ನೀಡಿರುವ ಐಡಿ ಕಾರ್ಡ್
ರಾಜ್ಯದ ಯಾವುದೇ ಜಾಗಕ್ಕಾದ್ರು ಸಂಚಾರ
ಯಾವ ಟೈಮ್​ಗಾದ್ರೂ ಬಸ್​ನಲ್ಲಿ ಸಂಚಾರ
ಒಂದು ವರ್ಷದವರೆಗೆ ಪಾಸ್​ ಅವಧಿ ಇರುತ್ತೆ
ದಿನದ 24 ಗಂಟೆ ಸಂಚಾರ ಮಾಡ್ಬೋದು

ಸದ್ಯ ಕೆಎಸ್ಆರ್ಟಿಸಿಯಲ್ಲಿ ಒಂದು ಲಕ್ಷ ಕಾರ್ಮಿಕರಿಗೆ ಈ ಪಾಸ್ ವಿತರಣೆ ಮಾಡಿದ್ದು, ಉಳಿದ ಎಲ್ಲಾ ಕಾರ್ಮಿಕರಿಗೆ ವಿತರಣೆ ಮಾಡಲಾಗುತ್ತೆ ಅಂತ ಕೆಎಸ್ಆರ್ಟಿಸಿ ಅಧ್ಯಕ್ಷ ಚಂದ್ರಪ್ಪ ತಿಳಿಸಿದ್ದಾರೆ.

ಕಟ್ಟಡ ಕಾರ್ಮಿಕರು ಪ್ರತಿ ದಿನ ಕೆಲಸಕ್ಕಾಗಿ ರಾಜ್ಯದ ವಿವಿಧೆಡೆ ಸಂಚರಿಸ್ತಾರೆ.. ಇದಕ್ಕಾಗಿ ಆಟೋ, ಬಸ್‌ ಗಳಲ್ಲಿ ಪ್ರಯಾಣ ವೆಚ್ಚ ಭರಿಸಬೇಕಾಗಿತ್ತು. ಸರ್ಕಾರ ಇವರ ನೆರವಿಗೆ ಉಚಿತ ಬಸ್‌ಪಾಸ್‌ ವ್ಯವಸ್ಥೆ ಆರಂಭಿಸಿದ್ದು, ಕಟ್ಟಡ ಕಾರ್ಮಿಕರು ತಮ್ಮ ಸ್ಥಳೀಯ ವ್ಯಾಪ್ತಿಯಲ್ಲಿ ಪ್ರಯಾಣ ಮಾಡಲು ಈ ಪಾಸ್‌ ಬಳಕೆ ಮಾಡಿಕೊಳ್ಳಬಹುದು. ಕೆಎಸ್ಆರ್ಟಿಸಿಗೆ ತಗಲುವ ವೆಚ್ಚವನ್ನು ಕಾರ್ಮಿಕ ಇಲಾಖೆ ಭರಿಸಲಿದೆ.

ಒಟ್ಟಿನಲ್ಲಿ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ಫ್ರೀ ಬಸ್ ಭಾಗ್ಯ ಘೋಷಣೆ ಮಾಡಲಾಗಿದೆ. ಇದನ್ನು ಎಷ್ಟರ ಮಟ್ಟಿಗೆ ಅಧಿಕಾರಿಗಳು ಅನುಷ್ಠಾನ ಮಾಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ಕೃಷ್ಣಮೂರ್ತಿ, ಪವರ್ ಟಿವಿ, ಬೆಂಗಳೂರು

Exit mobile version