ಬೆಂಗಳೂರು: ಕನ್ನಡ ಸಿನಿಮಾಗಳು ನಮ್ಮ ಹೆಮ್ಮೆ. ಅವುಗಳನ್ನು ಧರ್ಮಾಂಧ, ರಾಜಕಾರಣಕ್ಕೆ ಹೋಲಿಸಿ ಹಾಳು ಮಾಡುವುದು ಬೇಡ ಎಂದು ಕಾಂತಾರ ಸಿನಿಮಾದಲ್ಲಿ ನಟಿಸಿದ ಕಿಶೋರ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಲ್ಲಿರುವ ಕಥೆಯಾದ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಅಂತ ವಿವಾದತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಚೇತನ್ ಹೇಳಿಕೆಗೆ ಕರ್ನಾಟಕದೆಲ್ಲೆಡೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿದ ನಟ ಕಿಶೋರ್ ಕುಮಾರ್, ಕಾಂತಾರ ಮತ್ತು ಧರ್ಮ, ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ ಎಂದು ಕಾಂತಾರ ಸಿನಿಮಾಗೆ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಮನವಿ ಮಾಡಿದರು.
“ಕಾಂತಾರ” ಎಲ್ಲ ಒಳ್ಳೆಯ ಸಿನಿಮಾಗಳಂತೆ ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿಹೋದೀತು ಎಂದಿದ್ದರೆ.
ಅಂತೆಯೇ ಮುಂದುವರೆಸಿದ ಕಿಶೋರ್, ಕೇವಲ ಓಟಿಗಾಗಿ ಪಟೇಲ್, ಗಾಂಧಿ, ಬೋಸ್, ನೆಹ್ರೂ ಸಹಿತ ಕೋಟಿ ಕೋಟಿ ಸ್ವತಂತ್ರ್ಯ ಹೋರಾಟಗಾರರನ್ನೂ ಬಳಸುವ, ಅವಮಾನಿಸುವ ರಾಷ್ಟ್ರ ಗೀತೆ, ಧ್ವಜ, ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನ ಒಂದು ಕ್ಷಣ ಯೋಚಿಸಿಬೇಕೆಂದರು.