Site icon PowerTV

ಸೋರುತ್ತಿರುವ BMTC ಬಸ್‌ಗಳು.. ಪ್ರಯಾಣಿಕರು ಅಯೋಮಯ

ಬೆಂಗಳೂರು : ಈಗಾಗಲೇ ನಗರದಲ್ಲಿ ಕಳೆದ ಮೂರು ದಿನಗಳಿಂದ ಜಡಿ‌ ಮಳೆ ಬೀಳುತ್ತಿದೆ. ಸಂಜೆಯಾಗುತ್ತಿದ್ದಂತೆ ನಗರದಲ್ಲಿ ವರುಣಾರ್ಭಟ ಶುರುವಾಗ್ತಿದೆ. ಈ‌ ನಡುವೆ ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳ ಕಾಲ ಮತ್ತೆ ಬೆಂಗಳೂರಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ. ಗುರುವಾರ ರಾತ್ರಿ ದಾಖಲೆಯ ಮಳೆಯಾಗಿದ್ದು, ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯಗಳಲ್ಲೂ ವರುಣಾರ್ಭಟ ಜೋರಿತ್ತು. ಅದರಲ್ಲೂ ಯಲಹಂಕ, ಅಟ್ಟೂರು, ಚೌಡೇಶ್ವರಿ ವಾರ್ಡ್, ಆರ್ ಆರ್ ನಗರದ HMT ವಾರ್ಡ್ ಹಾಗೂ ಸಂಪಂಗಿರಾಮ ನಗರದಲ್ಲಿ ಹೆಚ್ಚಿನ ಮಳೆಯಾಗಿದೆ. ಹೀಗೆ ಮತ್ತೆ 4 ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಗುರುವಾರ ಸುರಿದ ಭಾರೀ ಮಳೆಗೆ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳು ಜಲಾವೃತಗೊಂಡಿತ್ತು. ಮಳೆಗೆ ಸೆವನ್ ಮಿನಿಸ್ಟರ್ಸ್ ಕ್ವಾಟ್ರಸ್ ಮುಂಭಾಗದ ರಸ್ತೆ ಸಂಪೂರ್ಣ ಕೆರೆಯಂತಾಗಿತ್ತು. ಸಚಿವ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ ಸೇರಿದಂತೆ ಏಳು ಸಚಿವರ ಸರ್ಕಾರಿ ನಿವಾಸದ ಗೇಟ್ ಮುಂದೆ ನೀರು ನಿಂತು ಕೊಂಡದಂತಾಗಿತ್ತು. ನೀರು ಹರಿಯಲು ಸೂಕ್ತ ಡ್ರೈನೇಜ್ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ನಿಂತಲ್ಲೇ ನಿಂತಿತ್ತು.

ಇನ್ನು ಬೆಂಗಳೂರಿನಲ್ಲಿ ಅಬ್ಬರಿಸುತ್ತಿರುವ ಮಳೆಗೆ ಜನ ಹೈರಾಣಾಗಿ‌ ಹೋಗುತ್ತಿದ್ದಾರೆ. ಮಳೆ ಅಂತ ಬಸ್ ಹತ್ತಿದ್ರೆ BMTC ಯಿಂದ ಪ್ರಯಾಣಿಕರಿಗೆ ನೆನೆಯುವ ಭಾಗ್ಯ ಸಿಗ್ತಿದೆ. ಶಿವಾಜಿನಗರ to ಕೆಆರ್ ಮಾರ್ಕೆಟ್ ನಡುವಿನ BMTC ಬಸ್ ಸೋರುತ್ತಿದ್ದು, ಬಸ್ ಒಳಗೆ ಸೀಟ್ ಇದ್ರೂ ಪ್ರಯಾಣಿಕರಿಗಿಲ್ಲ ಕುಳಿತುಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಡಕೋಟಾ ಬಸ್ ನಲ್ಲಿ ಪ್ರಯಾಣಿಸುವ ಜನರು ಬಸ್ ಒಳಗೂ ರೈನ್ ಕೋಟ್ ಹಾಕ್ಕೊಂಡೇ ಪ್ರಯಾಣಿಸಬೇಕಾದ ದುಸ್ಥಿತಿ ಎದುರಾಗಿದೆ.

ಒಟ್ಟಾರೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ನಗರದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

Exit mobile version