Site icon PowerTV

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕಾರು ಅಡ್ಡಗಟ್ಟಿ ಯುವಕರು ಪ್ರತಿಭಟನೆ

ಹಾವೇರಿ; ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ವಯೋಮಿತಿ(ವಯಸ್ಸು) ಹೆಚ್ಚಳ ಮಾಡುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಕಾರು ಅಡ್ಡಗಟ್ಟಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರತಿಭಟನೆ ಮಾಡಿದ ಘಟನೆ ಹಾವೇರಿಯ ಪ್ರವಾಸಿ ಮಂದಿರದಲ್ಲಿ ನಡೆದಿದೆ.

ಹಾವೇರಿ ಜಿಲ್ಲಾ ಪ್ರವಾಸಕ್ಕೆ ಅರುಣ್ ಸಿಂಗ್ ಇಂದು ಬಂದಿದ್ದರು. ಇದನ್ನರಿತ ಯುವಕರು ಹಾವೇರಿಯ ಪ್ರವಾಸಿ ಮಂದಿರದಲ್ಲಿ ಜಮಾಯಿಸಿ, ಅರುಣ್ ಸಿಂಗ್ ಅವರ ಕಾರು ತಡೆದು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ವಯೋಮಿತಿ ಹೆಚ್ಚಳ ಮಾಡುವಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆಗ್ರಹಿಸಿದರು.

ದೇಶದ ವಿವಿಧ ರಾಜ್ಯಗಳಲ್ಲಿ​ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ವಯೋಮಿತಿಯಲ್ಲಿ ಹೆಚ್ಚಳ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಈ ಹುದ್ದೆಗೆ ವಯೋಮಿತಿ ಹೆಚ್ಚಳ ಮಾಡುವಂತೆ ಅಭ್ಯರ್ಥಿಗಳು ಒತ್ತಾಯಿಸಿದರು.

ಸಚಿವ ಬಿಸಿ ಪಾಟೀಲ್ ಹಾಗೂ ಶಾಸಕ ಓಲೇಕಾರ ಮಾತನಾಡಿದರೂ ಸಹ ಕೇಳದ ಅಭ್ಯರ್ಥಿಗಳು, ನಮಗೆ ವಯೋಮಿತಿ ಹೆಚ್ಚಳ ಮಾಡುವ ಬಗ್ಗೆ ಭರವಸೆ ನೀಡೋ ವರೆಗೂ ಹೋಗೊದಿಲ್ಲ ಎಂದು ಅಭ್ಯರ್ಥಿಗಳು ಅರುಣ್​ ಸಿಂಗ್​ ಅವರ ಕಾರಿನ‌ ಮುಂದೆ ಕುಳಿತು ಪಟ್ಟು ಹಿಡಿದರು. ಬಳಿಕ ಮಧ್ಯ ಪ್ರವೇಶಿಸಿದ ರಾಣೇಬೆನ್ನೂರ ಶಾಸಕ ಅರುಣ್ ಕುಮಾರ್ ಪೂಜಾರ ಯುವಕರನ್ನ ಹಿಡಿದು ಎಬ್ಬಿಸಿದರು.

ನಂತರ ಅರುಣ್ ಸಿಂಗ್ ಕಾರಿನಿಂದ ಇಳಿದು ಬಂದು ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸುತ್ತೇನೆ ಎಂದು ಹೇಳಿ, ಹುಬ್ಬಳ್ಳಿಗೆ ತೆರಳಿದರು.

Exit mobile version