Site icon PowerTV

ದತ್ತು ಪಡೆದ ಗ್ರಾಮವನ್ನೇ ಮರೆತ್ರಾ ಅಭಿನಯ ಚಕ್ರವರ್ತಿ..?

ಶಿವಮೊಗ್ಗ : ಅಭಿನಯ ಚಕ್ರವರ್ತಿ, ಬಾದ್ ಶಾಹ, ಆಲ್ ಇಂಡಿಯಾ ಕಟೌಟ್, ಕಿಚ್ಚ ಸುದೀಪ್ ಹೀಗೆ ಹಲವಾರು ನಾಮಧೇಯಗಳಲ್ಲಿ ಕರೆಸಿಕೊಳ್ಳುವ ಶಿವಮೊಗ್ಗ ಮೂಲದ ಕಿಚ್ಚ ಸುದೀಪ್‌ಗೆ ಇದೀಗ ಮಲೆನಾಡಿಗರೇ ಪ್ರಶ್ನೆ ಮಾಡುವಂತಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದ ಆವಿಗೆ ಎಂಬ ಈ ಕುಗ್ರಾಮವನ್ನು, ಎರಡು ವರ್ಷದ ಹಿಂದೆ ದತ್ತು ಸ್ವೀಕರಿಸಿ ಬೋರ್ಡ್ ಲಗತ್ತಿಸಿದ ಬಳಿಕ ಇಲ್ಲಿಗೆ ಯಾರೂ ಬಂದಿಲ್ಲ.ನಿಮ್ಮ ಅಭಿಮಾನಿಗಳೇ ಇರುವ ನಿಮ್ಮ ಜಿಲ್ಲೆ ಶಿವಮೊಗ್ಗದ ಸಾಗರ ತಾಲ್ಲೂಕಿನ ಆವಿಗೆಯ ಅಭಿವೃದ್ದಿಗೆ ಕೈಜೋಡಿಸಿ. ನಿಮ್ಮ ಸಂಸ್ಥೆ ದತ್ತು ಪಡೆದ ಆವಿಗೆ ಶರಾವತಿ ನದಿಯ ಹಿನ್ನೀರಿನ ಸಂತ್ರಸ್ತ ಜನರ ಗ್ರಾಮ ಇದಾಗಿದ್ದು, ಸುದೀಪ್ ಮತ್ತು ಅವರ ಕಡೆಯವರು ಯಾರೂ ನಮ್ಮ ಗ್ರಾಮಕ್ಕೆ ಭೇಟಿ ಕೊಟ್ಟಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿರುವ ಗ್ರಾಮಸ್ಥ ಚಂದ್ರ ಕುಮಾರ್ ಜೈನ್ ತಮ್ಮ ಫೇಸ್ ಬುಕ್ ನಲ್ಲಿ ಫೋಟೋಗಳನ್ನು ಶೇರ್ ಮಾಡಿ ಕಿಚ್ಚ ಸುದೀಪ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಿಜಕ್ಕೂ ಈ ಚಾರಿಟೇಬಲ್ ಸೊಸೈಟಿ ನಟ ಸುದೀಪರದ್ದೇ ಆದರೆ ದತ್ತು ತೆಗೆದುಕೊಂಡ ಕುಗ್ರಾಮದ ಅಭಿವೃದ್ಧಿ ಯಾಕೆ ವಿಳಂಬ ಎಂದು ಕೂಡ ಪ್ರಶ್ನಿಸಿದ್ದಾರೆ. ಇದು ನಟ ಸುದೀಪರ ಗಮನಕ್ಕೆ ಬರದ ಅವರ ಹೆಸರಿನ ಸಂಸ್ಥೆ ಆಗಿದ್ದರೆ ನಟ ಸುದೀಪರು ತಕ್ಷಣ ಈ ಬಗ್ಗೆ ಪ್ರತಿಕ್ರಿಯಿಸಬೇಕು ಅಂತಾ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಾರೆ, ಶಿವಮೊಗ್ಗದ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸಿಗಂಧೂರು ಸಮೀಪದ ಈ ಆವಿಗೆ ಎಂಬ ಕುಗ್ರಾಮವನ್ನು, ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಕಿಟ್ಟಿ ಮತ್ತು ಉಪಾಧ್ಯಕ್ಷರಾದ ಕೋದಂಡ ಎಂಬುವವರು, ದತ್ತು ತೆಗೆದುಕೊಂಡಿದ್ದರ ಬಗ್ಗೆ ದತ್ತುಗ್ರಾಮ ಆವಿಗೆ ಎಂದು ಬೋರ್ಡ್ ಹಾಕಿದ್ದಷ್ಟೇ, ಇದುವರೆಗೂ ಯಾವುದೇ ಅಭಿವೃದ್ಧಿ ಕಾಣದೇ ಇರುವುದು ಈ ಊರಿನವರ ಬೇಸರಕ್ಕೆ ಕಾರಣವಾಗಿದೆ. ಕಿಚ್ಚ ಸುದೀಪ್, ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯೇ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ.

Exit mobile version