Site icon PowerTV

ನಿಮ್ಮ ವಿಶ್ವಗುರುಗೆ ಒಂದು ಪತ್ರಿಕಾಗೋಷ್ಠಿ ನಡೆಸುವಂತೆ ಹೇಳಿ, ಬಿಎಸ್​ವೈಗೆ ಸಿದ್ದು ಗುದ್ದು.!

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒಬ್ಬಂಟಿಯಾಗಿ ಯಾತ್ರೆ ಮಾಡಲು ಧೈರ್ಯ ಇಲ್ಲ. ಜನ ಕಲ್ಲು ಹೊಡೆಯುತ್ತಾರೋ ಎಂಬ ಭಯವಿದೆ. ಹೀಗಾಗಿ ರಕ್ಷಣೆಗಾಗಿ ಬಿ.ಎಸ್​ ಯಡಿಯೂರಪ್ಪ ಅವರನ್ನ ಜತೆಯಲ್ಲಿ ಕರೆದುಕೊಂಡು ಬಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುಟುಕಿದ್ದಾರೆ. 

ಇಂದು ಬಿಜೆಪಿ ಜನ ಸಂಕಲ್ಪ ಕುರಿತು ಮಾತನಾಡಿದ ಸಿದ್ದರಾಮಯ್ಯ, ಜನಸಂಕಲ್ಪ ಯಾತ್ರೆಗೆ ಹೊರಟಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬೊಮ್ಮಾಯಿ ಅವರು ಕಾರು ಜೀಪು ಬಿಟ್ಟು ನಾಲ್ಕು ಕಿ.ಮೀ ಎಡವದೆ ನಡೆದುಕೊಂಡು ಹೋಗಿ. ಬಳಿಕ ಸಿದ್ದರಾಮಯ್ಯ ಎಂಬ ಹೆಸರೆತ್ತದೆ ಐದು ನಿಮಿಷ ಭಾಷಣ ಮಾಡಿ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದರು.

ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಾಗ ಬಹಿರಂಗವಾಗಿಯೇ ಬಿಎಸ್​ವೈ ಅವರು ಕಣ್ಣೀರು ಹಾಕಿದ್ದನ್ನು ರಾಜ್ಯದ ಜನ ನೋಡಿದ್ದಾರೆ. ಅವರ ಬೆನ್ನಿಗೆ ಇರಿದವರು ಯಾರು ಎನ್ನುವುದೂ ಜನರಿಗೆ ಗೊತ್ತು. ಯಡಿಯೂರಪ್ಪನವರನ್ನು ಕರೆದುಕೊಂಡು ಬಂದ ಕೂಡಲೇ ಜನ ನಿಮ್ಮ ದ್ರೋಹವನ್ನು ಮರೆಯಲಾರರು ಎಂದರು. 

ಅಂತೆಯೇ ಮುಂದುವರೆಸಿ ಮಾತನಾಡಿ, ರಾಹುಲ್ ಗಾಂಧಿಯವರನ್ನು ಬಚ್ಚಾ ಎಂದು ಹೇಳುವ ಬಿಎಸ್​ವೈ ಅವರೇ, ನಿಮ್ಮ ಮೋದಿ ಅವರು ವಿಶ್ವಗುರು ಅಲ್ಲ ಅವರೊಬ್ಬ ಪುಕ್ಕಲು ಗುರು. ಅವರು ನಮ್ಮನ್ನು ಎದುರಿಸುವುದು ಬೇಡ, ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ ಸಿದ್ದರಾಮಯ್ಯ ಅವರು ಗುಡುಗಿದರು. 

Exit mobile version