Site icon PowerTV

ವಿಶ್ವ ಬ್ಯಾಂಕ್​​​​ ಮೊರೆ ಹೋದ BBMP..!

ಬೆಂಗಳೂರು : ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಮಳೆಯಿಂದ ಎದುರಾಗುವ ಪರಿಣಾಮಗಳ ಕುರಿತಂತೆ ಭೇಟಿ ನೀಡಿರುವ ವಿಶ್ವ ಬ್ಯಾಂಕ್‌ನ ಪ್ರತಿನಿಧಿಗಳು, ಈಗ ನೇರ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ವರ್ಲ್ಡ್ ಬ್ಯಾಂಕ್ ಅಧಿಕಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಪರಿಸ್ಥಿತಿ ಬಗ್ಗೆಯೂ ವಿವರಿಸಿದ್ದಾರೆ. ಪ್ರಮುಖವಾಗಿ ನಗರದ ರಾಜಕಾಲುವೆ ವ್ಯವಸ್ಥೆ, ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳ ವಿವರ, ಅದಕ್ಕೆ ಬಿಬಿಎಂಪಿ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ತಿಳಿಸಲಾಗಿದೆ.

ವಿಶ್ವ ಬ್ಯಾಂಕ್ ಪ್ರತಿನಿಧಿಗಳನ್ನು ಕೋರಮಂಗಲದ ಕೆ100 ರಾಜಕಾಲುವೆ ಅಭಿವೃದ್ಧಿ ಯೋಜನೆ ಅನುಷ್ಠಾನದ ಪ್ರದೇಶಕ್ಕೆ ಕರೆದೊಯ್ದ ಬಿಬಿಎಂಪಿ ಅಧಿಕಾರಿಗಳು, ಕೋರಮಂಗಲದ ಕಣಿವೆಯ ಯೋಜನೆ ಕುರಿತು ವಿವರಿಸಿದ್ದಾರೆ. ಅದರ ಜೊತೆಗೆ ಕಳೆದ ತಿಂಗಳ ಮಳೆ ಪ್ರವಾಹಕ್ಕೆ ಸಿಲುಕಿದ್ದ ಹೊರ ವರ್ತುಲ ರಸ್ತೆಗಳಿಗೂ ಕರೆದುಕೊಂಡು ಹೋಗಿ ಪರಿಸ್ಥಿತಿಯನ್ನು ವಿವರಿಸಲಾಗಿದೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

ರಾಜ್ಯದ ನಗರ, ಕರಾವಳಿ ಪ್ರದೇಶಗಳಲ್ಲಿ ಮಳೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ವಿಶ್ವ ಬ್ಯಾಂಕ್‌ನ ಪ್ರತಿನಿಧಿಗಳು ರಾಜ್ಯಕ್ಕೆ ಬಂದಿದ್ದಾರೆ. ಸಮಸ್ಯೆಗಳ ನಿವಾರಣೆಗೆ ವಿಶ್ವ ಬ್ಯಾಕ್‌ನಿಂದ ನೆರವು ನೀಡುವ ಕುರಿತು ಇನ್ನೂ ನಿರ್ಧರಿಸಿಲ್ಲ. ಆದ್ರೆ ಮಳೆ ಅನಾಹುತದಿಂದ ಸಿಲಿಕಾನ್ ಸಿಟಿ ಮಾನ ಅಂತೂ ವಿಶ್ವ ಮಟ್ಟದಲ್ಲಿ ಹರಾಜಾಗಿರೋದಂತು ಸತ್ಯ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

Exit mobile version