ದೇವರ ಸ್ವರೂಪಿಯಾಗಿದ್ದ ಮೊಸಳೆ ಇನ್ನಿಲ್ಲ

ಮಂಗಳೂರು : ಸರೋವರ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಕರ್ನಾಟಕ ಗಡಿಭಾಗ ಕಾಸರಗೋಡು ಜಿಲ್ಲೆಯ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಕ್ಷೇತ್ರ ಪಾಲಕನಂತಿದ್ದ ಮೊಸಳೆ ‘ಬಬಿಯಾ’ ಕೊನೆಯುಸಿರೆಳೆದಿದೆ.

ದೇವಸ್ಥಾನವನ್ನು ಆವರಿಸಿಕೊಂಡಿದ್ದ ಕೆರೆಯಿಂದಾಗಿ ಇಲ್ಲಿಗೆ ಸರೋವರ ಕ್ಷೇತ್ರ ಎಂದು ಹೆಸರಿದೆ. ಇಲ್ಲಿನ ಕೆರೆಯಲ್ಲಿ ಹಲವಾರು ವರ್ಷಗಳಿಂದ ಇದ್ದ ಮೊಸಳೆಯನ್ನು ಭಕ್ತರು ಬಬಿಯಾ ಎಂದು ಕರೆಯುತ್ತಿದ್ದರು. ಪ್ರತಿನಿತ್ಯ ಪೂಜೆಯ ಬಳಿಕ ಅರ್ಚಕರೇ ಮೊಸಳೆಗೆ ನೈವೇದ್ಯ ಅರ್ಪಿಸುತ್ತಿದ್ದರು. ಕೆಲವೊಮ್ಮೆ ಮೊಸಳೆ ಕೆರೆಯಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಿತ್ತು.

ಇನ್ನು, ಹಲವಾರು ಭಕ್ತರು ಇಲ್ಲಿನ ದೇವರ ಮೊಸಳೆ ನೋಡುವುದಕ್ಕಾಗಿಯೇ ತೆರಳುತ್ತಿದ್ದರು. ದೇವರ ನೈವೇದ್ಯವೇ ಬಬಿಯಾಗೆ ನಿತ್ಯ ಆಹಾರವಾಗಿತ್ತು. ಹೀಗಾಗಿ ಅನಂತದ್ಮನಾಭ ಸ್ವಾಮಿಯೇ ಮೊಸಳೆಯ ರೂಪದಲ್ಲಿ ದರ್ಶನ ನೀಡುತ್ತಿದ್ದಾನೆ ಎಂಬ ಪ್ರತೀತಿ ಬೆಳೆದಿತ್ತು. ಸೋಮವಾರ ಬೆಳಗ್ಗೆ ಮೃತಪಟ್ಟ ಮೊಸಳೆಯನ್ನು ಅರ್ಚಕರು ಆರತಿ ಎತ್ತಿ ಭಕ್ತಿಪೂರ್ವಕ ನಮಿಸಿದರು. ಬಳಿಕ ಭಕ್ತರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ‌

RELATED ARTICLES

Related Articles

TRENDING ARTICLES