Site icon PowerTV

ಮಗು ಏಕೆ ಕಪ್ಪಾಗಿದೆ ಎಂದು ಪತ್ನಿಯನ್ನೇ ಕೊಂದ ಪತಿ

ಆಂಧ್ರಪ್ರದೇಶ :  ಪತ್ನಿ ಹಾಗೂ ತನ್ನ ಬಣ್ಣ ಬಿಳಿಯದ್ದಾಗಿದ್ದರೂ ಮಗುವಿನ ಬಣ್ಣ ಮಾತ್ರ ಏಕೆ ಕಪ್ಪಾಗಿದೆ ಎಂದು ಪತ್ನಿಯ ಶೀಲ ಶಂಕಿಸಿ ಪತಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.

ಒಡಿಶಾದ ಉಮ್ಮರ್‌ಕೋಟ್‌ನ ಸಿಲಾಟಿಗಾಂವ್ ಗ್ರಾಮದ ಮಾಣಿಕ್ ಘೋಷ್ ಇಂತಹದ್ದೊಂದು ಕೃತ್ಯ ಎಸಗಿದ್ದಾನೆ. ಈತನ ಕೃತ್ಯಕ್ಕೆ ಬಲಿಯಾದವರು ಕರಗಾಂವ್ ಗ್ರಾಮದ ಲಿಪಿಕಾ ಮಂಡಲ್. ಮೊದಲು ಸಹಜ ಸಾವು ಎಂದೇ ಬಿಂಬಿತವಾಗಿದ್ದ ಈ ಸಾವಿನ ಪ್ರಕರಣ ನಂತರದಲ್ಲಿ ಕೊಲೆ ಎಂಬುದು ತಿಳಿದುಬಂದಿದೆ.

ಕಳೆದ 7 ವರ್ಷಗಳ ಹಿಂದೆ ಮಾಣಿಕ್ ಘೋಷ್ ಹಾಗೂ ಲಿಪಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ನಂತರ ಇಬ್ಬರೂ ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ಕಾಕಿನಾಡಕ್ಕೆ ವಲಸೆ ಬಂದಿದ್ದರು. ಎರಡೂವರೆ ವರ್ಷಗಳ ಹಿಂದೆ ಈ ದಂಪತಿಗೆ ಹೆಣ್ಣು ಮಗು ಹುಟ್ಟಿತ್ತು. ಆದರೆ ಇಬ್ಬರೂ ಬೆಳ್ಳಗಿದ್ದರೂ ಮಗು ಮಾತ್ರ ಏಕೆ ಕಪ್ಪಗೆ ಇದೆ ಎಂದು ಘೋಷ್ ಸದಾ ಪತ್ನಿಯ ಬಗ್ಗೆ ಸಂದೇಹ ಪಡುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಪತಿಯ ದೌರ್ಜನ್ಯದಿಂದ ಬೇಸತ್ತ ಲಿಪಿಕಾ ತನ್ನ ತವರು ಮನೆಗೆ ಬಂದಿದ್ದಳು. ನಂತರ ಕುಟುಂಬಸ್ಥರು ಇಬ್ಬರನ್ನೂ ಸಮಾಧಾನಪಡಿಸಿ ವಾಪಸ್ ಕಳುಹಿಸಿದ್ದರು.ಆದರೆ ಇದೇ ತಿಂಗಳ 18ರಂದು ರಾತ್ರಿ ಲಿಪಿಕಾಗೆ ಮೂರ್ಛೆ ಹೋಗಿರುವುದಾಗಿ ಹೇಳಿದ್ದ ಪತಿ, ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು.

ಇನ್ನು, ಕುತ್ತಿಗೆಯಲ್ಲಿ ಗಾಯದ ಗುರುತು ಕಂಡುಬಂದಿದ್ದು ಸಂದೇಹಕ್ಕೆ ಎಡೆ ಮಾಡಿಕೊಟ್ಟಿತ್ತು. ಆದರೆ ಪತಿಯೇ ಈ ಕೊಲೆ ಮಾಡಿದ್ದಾನೆ ಎಂಬ ಬಗ್ಗೆ ಪುರಾವೆಗಳು ಇರಲಿಲ್ಲ. ನಂತರ ಸಾಕ್ಷಿ ಹೇಳಿದ್ದೆ ಪುಟ್ಟ ಕಂದಮ್ಮ. ಅಮ್ಮನ ಸಾವಿನ ಬಳಿಕ ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗು, ಅಜ್ಜ-ಅಜ್ಜಿಗೆ ಅಂದು ತಾನು ಕಂಡಿರುವ ದೃಶ್ಯ ವಿವರಿಸಿದೆ. ಅಮ್ಮನ ಗಂಟಲನ್ನು ಎರಡೂ ಕೈಗಳಿಂದ ಅಪ್ಪ ಹಿಡಿದುಕೊಂಡಿದ್ದು, ಅಮ್ಮ ಒದ್ದಾಡಿದ್ದು, ನಂತರ ಅಮ್ಮ ಏನೂ ಮಾತನಾಡದೇ ಇದ್ದುದನ್ನು ಮಗು ವಿವರಿಸಿದೆ.

Exit mobile version