Site icon PowerTV

ಅರಮನೆನಗರಿಯಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ

ಮೈಸೂರು : ಎಷ್ಟೇ ಶಬ್ಧ ಬಂದ್ರೂ ಡೋಂಟ್ ಕೇರ್. ಸಿಡಿಮದ್ದು ಸಿಡಿಸಿದ್ರೂ ಇದ್ ಯಾವುದಕ್ಕೂ ಕ್ಯಾರೇ ಎನ್ನದ ದಸರಾ ಗಜಪಡೆ. ಎಸ್ ಇದು ದಸರಾ ಗಜಪಡೆಯ ಗತ್ತು ಗಮ್ಮತ್ತು. ಇದು ಸಿಡಿಮದ್ದು ತಾಲೀಮಿನ‌ ಹೈಲೈಟ್ಸ್. ಹೌದು ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಮೂರನೇ ಹಾಗೂ ಅಂತಿಮ ಹಂತದ ಸಿಡಿಮದ್ದು ತಾಲೀಮು ನಡೆಸಲಾಯಿತು. ವಿಜಯದಶಮಿಯ ದಿನದಂದು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ಮತ್ತು ರಾಷ್ಟ್ರಗೀತೆ ನುಡಿಸುವಾಗ ಗೌರವಾರ್ಥವಾಗಿ 3 ಸುತ್ತಿನಲ್ಲಿ 21 ಕುಶಾಲ ತೋಪುಗಳನ್ನು ಸಿಡಿಸುವುದು ಸಂಪ್ರದಾಯ. ಹೀಗೆ ಸಿಡಿಮದ್ದು ಸಿಡಿಸಿದಾಗ ಉಂಟಾಗುವ ಭಾರೀ ಶಬ್ದದಿಂದ ಆನೆಗಳು ಕುದುರೆಗಳು ಬೆದರುತ್ತವೆ, ವಿಚಲಿತಗೊಳ್ಳುತ್ತವೆ. ಹೀಗಾಗಿ ಆನೆಗಳು ಕುದುರೆಗಳು ಈ ಸಿಡಿಮದ್ದು ಶಬ್ದಕ್ಕೆ ಹೊಂದಿಕೊಳ್ಳಲು ಈ ತಾಲೀಮು ನಡೆಸಲಾಯಿತು.

ಇನ್ನೂ ಶ್ರೀರಂಗಪಟ್ಟಣ ದಸರಾಕ್ಕೆ ಐದು ಆನೆಗಳನ್ನು ಕೇಳಿದ್ದಾರೆ. ಶ್ರೀರಂಗಪಟ್ಟಣ ದಸರಾದಲ್ಲಿ ಮಹೇಂದ್ರ ಅಂಬಾರಿ ಹೊರಲಿದ್ದಾನೆ. ಮಹೇಂದ್ರನೊಂದಿಗೆ ಎರಡು ಹೆಣ್ಣಾನೆಗಳು ಹೋಗಲಿದ್ದು, ಎರಡು ಗಂಡಾನೆಗಳನ್ನು ಕಳಿಸುವ ಸಾಧ್ಯತೆಯಿದೆ.ಅಲ್ಲದೆ, ರಾಜಮನೆತನದ ಖಾಸಗಿ ದರ್ಬಾರ್‌ಗೆ ಪಟ್ಟದಾನೆಗಳಾಗಿ ಧನಂಜಯ ಮತ್ತು ಭೀಮನನ್ನು ಕಳುಹಿಸುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೇಳಿದ್ದಾರೆ. ಹಾಗಾಗಿ ಧನಂಜಯ, ಭೀಮ ಖಾಸಗಿ ರಾಜವಂಶಸ್ಥರ ದರ್ಬಾರ್‌ನ ವಿಧಿಗಳಲ್ಲಿ ಭಾಗಿಯಾಗಲಿವೆ.

ಒಟ್ಟಾರೆ ಈ ಬಾರಿಯ ಅದ್ದೂರಿ ದಸರಾ ಆಚರಣೆಗ ದಸರಾ ಗಜಪಡೆಗಳು ಸಿದ್ದವಾಗುತ್ತಿದ್ದು, ಭರ್ಜರಿ ತಯಾರಿ ನಡೆಸಿವೆ. ಎಲ್ಲವೂ ಯಶಸ್ವಿಯಾಗಿ ಸುಸೂತ್ರವಾಗಿ ನಡೆಯಲಿ ಅನ್ನೊದೇ ಎಲ್ಲರ ಆಶಯ.

ಸುರೇಶ್ ಬಿ. ಪವರ್ ಟಿವಿ ಮೈಸೂರು.

Exit mobile version