Site icon PowerTV

ಯುವಕನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿದ ಪೋಷಕರು

ಮಂಗಳೂರು: ಬಸ್​ಯೊಂದರಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡು ಮೆದುಳು ಡೆಡ್ ಆಗಿರುವ ಪಿಯುಸಿ ವಿದ್ಯಾರ್ಥಿಯ ಅಂಗಾಂಗ ದಾನ ಮಾಡಲಾಗಿದೆ.

ಮಂಗಳೂರಿನ ಉಳ್ಳಾಲದ ಯಶರಾಜ್ (18) ಎಂಬ ಯುವಕ ವಾರದ ಹಿಂದೆ ಬಸ್ಸಿನಲ್ಲಿ ಬರುತ್ತಿದ್ದಾಗ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ. ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನ ಮೆದುಳು ನಿಷ್ಕ್ರಿಯ ಆಗಿರುವ ಬಗ್ಗೆ ವೈದ್ಯರು ನಿನ್ನೆ ಕುಟುಂಬಸ್ಥರಿಗೆ ತಿಳಿಸಿದ್ದು ಅಂಗಾಂಗ ದಾನಕ್ಕೆ ಸಲಹೆ ಮಾಡಿದ್ದರು. ಮಗನ ಅಗಲಿಕೆಯ ದುಃಖದ ನಡುವೆಯೂ ಅಂಗಾಂಗ ದಾನಕ್ಕೆ ಪೋಷಕರು ಒಪ್ಪಿಗೆ ನೀಡಿದ್ದರು.

ಅದರಂತೆ, ರಾಜ್ಯ ಸರಕಾರದ ಜೀವ ಸಾರ್ಥಕತೆ ತಂಡದ ಸದಸ್ಯರು ಅಂಗಾಂಗ ರವಾನೆ ಮಾಡಿದ್ದಾರೆ. ಲಿವರನ್ನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಎರಡು ಕಣ್ಣು ಮತ್ತು ಒಂದು ಕಿಡ್ನಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಝೀರೋ ಟ್ರಾಫಿಕ್ ನಲ್ಲಿ ರವಾನಿಸಲಾಗಿದೆ. ಒಂದು ಕಿಡ್ನಿಯನ್ನು ಇಂಡಿಯಾನ ಆಸ್ಪತ್ರೆಯಲ್ಲಿಯೇ ಬೇರೊಬ್ಬ ವ್ಯಕ್ತಿಗೆ ಕಸಿ ಮಾಡಲಾಗಿದೆ. ಕಿಡ್ನಿ ಮತ್ತು ಲಿವರನ್ನು ನಾಲ್ಕು ಗಂಟೆಯ ಒಳಗಡೆ ಕಸಿ ಮಾಡಬೇಕಿದ್ದು ಅದಕ್ಕಾಗಿ ಪೊಲೀಸರು, ಅಧಿಕಾರಿಗಳ ಮೂಲಕ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

Exit mobile version