Site icon PowerTV

ಸೋನಿಯಾಗಾಂಧಿ, ರಾಹುಲ್ ಗಾಂಧಿ‌ ಏಕೆ ಬೇಲ್‌ ಮೇಲೆ ಇದ್ದಾರೆ : ನಳೀನ್ ಕುಮಾರ್ ಕಟೀಲ್

ಮೈಸೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮ ಕುರಿತು ತನಿಖೆ ನಡೆಸಲಾಗುವುದು ಎಂದು ಮೈಸೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮ ಕುರಿತು ತನಿಖೆ ನಡೆಸಲಾಗುವುದು. ನಮ್ಮ ಸರ್ಕಾರದ ಅವಧಿಯಲ್ಲಿ ಪಿಎಸ್ಐ ನೇನಕಾತಿ ಅಕ್ರಮ ಹೊರಬಂತು. ಕೂಡಲೇ ನಾವು ತನಿಖೆಗೆ ಆದೇಶಿಸಿದೆವು. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೆ ಕ್ರಮಕ್ಕೆ ಮುಂದಾಗಿದ್ದೇವೆ. ಸಮಾಜವಾದಿ ಎನ್ನುವ ಸಿದ್ದರಾಮಯ್ಯ ತಾವು ಸಿಎಂ ಆಗಿದ್ದಾಗ ಏಕೆ ನೈತಿಕತೆ ಪ್ರದರ್ಶನ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಇನ್ನು, ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಇವರು ಏನು ಮಾಡಿದರು? ಸಿದ್ದರಾಮಯ್ಯ ಸರ್ಕಾರದ ಅವಧಿಯ ಹಗರಣಗಳನ್ನ ಬಚ್ಚಿಟ್ಟಿದ್ದಾರೆ. ಅದನ್ನ ಬಿಚ್ಚಿಡುವ ಕೆಲಸವನ್ನ ನಾವು ಮಾಡುತ್ತಿದ್ದೇವೆ. ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಏಕೆ ಬೇಲ್ ಮೇಲೆ‌ ಇದ್ದಾರೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ‌ ಏಕೆ ಬೇಲ್‌ ಮೇಲೆ ಇದ್ದಾರೆ. ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರು ಏಕೆ ಬೇಲ್ ಮೇಲೆ ಇದ್ದಾರೆ ಎಂದರು.

ಅದಲ್ಲದೇ, 40% ಕಮೀಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಿದ್ದರಾಮಯ್ಯ ಬಳಿ ದಾಖಲಾತಿಗಳಿದ್ದರೆ ಬಿಡುಗಡೆ ಮಾಡಲಿ. ಆದರೆ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ. ಬೋಫರ್ಸ್ ಹಗರಣದಲ್ಲಿ ಕಾಂಗ್ರೆಸ್ ಏನು ಹೇಳುತ್ತಿತ್ತು. ಆದರೆ, ತನಿಖೆ ಬಳಿಕ ಏನಾಯ್ತು. ಸಿದ್ದರಾಮಯ್ಯ ಬಳಿ ಸಾಕ್ಷ್ಯಗಳಿದ್ದರೆ ಬಹಿರಂಗಪಡಿಸಲಿ ಎಂದು ನಳೀನ್ ಕುಮಾರ್ ಕಟೀಲ್ ಸವಾಲ್ ಮಾಡಿದ್ದಾರೆ.

Exit mobile version