Site icon PowerTV

ಮೇಘಸ್ಫೋಟಕ್ಕೆ ನೀರುಪಾಲಾದ ಬೆಳೆಗಳು

ಚಿಕ್ಕಬಳ್ಳಾಪುರ : ಮೊಣಕಾಲುದ್ದದ ನೀರಿನಲ್ಲಿ ಮುಳುಗಿರುವ ತನ್ನ ಬೆಳೆಗಳ ಸ್ಥಿತಿಯನ್ನು ಕಂಡು ಅಯ್ಯೋ‌ ಅಂತ ತಲೆ ಮೇಲೆ ಕೈ ಹೊತ್ತು ದೇವರನ್ನು ನೆನಪಿಸಿಕೊಳ್ತಾ ಇರುವ ಈ ರೈತರ ಕರುಣಾಜನಕ ಸ್ಥಿತಿ‌ ಯಾರೋಬ್ಬರಿಗೂ ಬರಬಾರದು. ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದಾಗಿ ಟಮೋಟೋ, ದ್ರಾಕ್ಷಿ, ಪಪ್ಪಾಯ, ಹಿಪ್ಪುನೇರಳೆ, ಹೂವಿನ ಬೆಳೆಗಳು ಸೇರಿ 2,825 ಎಕರೆಯಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳು, 605 ಎಕರೆಯಷ್ಟು ಕೃಷಿ ಬೆಳೆಗಳು, 150 ಕ್ಕೂ ಹೆಚ್ಚು ಮನೆಗಳು ಕುಸಿತ ಕಂಡಿದ್ದು, ನೂರಾರು ಜಾನುವಾರು ಸಾವನಪ್ಪಿವೆ.

ಮಳೆರಾಯನ ಆರ್ಭಟಕ್ಕೆ ಒಂದೇ ದಿನ ರೈತರ ಬದುಕು ಮೂರಾಬಟ್ಟೆಯಾಗಿದ್ದು, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ರೈತರ ಬೆಳೆಗಳ ಜಂಟಿ ಸಮೀಕ್ಷೆ ನಡೆಸಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಏಕ್ ರೂಪಕೌರ್ ನೇತೃತ್ವದಲ್ಲಿ ಅಧಿಕ ಅಧಿಕಾರಿಗಳ ಸಭೆ ನಡೆಸಿ, ನಷ್ಟಕ್ಕೊಳಗಾದ ರೈತರಿಗೆ ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್​ಗೆ 6800 ರೂ, ನೀರಾವರಿ ಬೆಳೆಗಳಿಗೆ ಹೆಕ್ಟೇರಿಗೆ 13,500 ಹಾಗೂ ಬಹುವಾರ್ಷಿಕ ಬೆಳೆಗಳಿಗೆ 18 ಸಾವಿರ ರೂಪಾಯಿ ಪರಿಹಾರಕ್ಕೆ ತ್ವರಿತಗತಿ ಕ್ರಮಕ್ಕೆ ಸೂಚಿಸಲಾಯಿತು.

ರಾಜಕಾಲುವೆಗಳ ಒತ್ತುವರಿಯಿಂದ ರೈತರ ತೋಟಗಳಿಗೆ ಮಳೆ ನೀರು ನುಗ್ಗಿದ್ದು, ಹಂತಹಂತವಾಗಿ ರಾಜಕಾಲುವೆಗಳ ತೆರವು ಕಾರ್ಯಾಚರಣೆ ಕೈಗೊಂಡು ರೈತರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ಯಾರು ಏನೇ ಹೇಳಿದರೂ ಜನ ದುರಾಸೆಯ ಮೋಜಿನಲ್ಲಿ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡಿದ್ದು ಈ ಸಂಕಷ್ಟ ತಂದೊಡ್ಡಿದೆ.

ಮಲ್ಲಪ್ಪ. ಎಂ.ಶ್ರೀರಾಮ್.ಪವರ್ ಟಿವಿ. ಚಿಕ್ಕಬಳ್ಳಾಪುರ

Exit mobile version