Site icon PowerTV

ಮಳೆಯ ಆರ್ಭಟ, ಮನೆಗೋಡೆ ಕುಸಿದು ಯುವಕ ಸಾವು

ಚಾಮರಾಜನಗರ : ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಾಗಿ ಮಳೆಯ ಅವಾಂತರ ಮುಂದುವರೆದಿದ್ದು, ಮನೆಗೋಡೆ ಕುಸಿದು ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಹ ನಡೆದಿದೆ.

ಜಿಲ್ಲಾದ್ಯಂತ ನಿನ್ನೆ ರಾತ್ರಿ ಬಿದ್ದ ಮಳೆ ಜಿಲ್ಲೆಯ ಜನರು ನಡುಗಿದ್ದಾರೆ. ತಡರಾತ್ರಿ ಬಂದ ಜೋರು ಮಳೆಗೆ ಜಿಲ್ಲೆಯ ಜ್ಯೋತಿಗೌಡನಪುರ ಗ್ರಾಮಕ್ಕೆ ಮಧ್ಯೆರಾತ್ರಿ ಏಕಾಏಕಿ ಮೂರು ನಾಲ್ಕು ಅಡಿ ನೀರು ನುಗ್ಗಿ ನಿದ್ರೆಗೆ ಜಾರಿದ್ದ ಜನರು ಬೆಚ್ಚಿ ಬೀಳುವಂತೆ ಮಾಡಿ ರಾತ್ರಿಯಿಡೀ ಜೀವ ಕೈಯಲ್ಲಿ ಹಿಡಿದುಕೊಂಡು ದೇವರ ಜಪ ಮಾಡುವಂತೆ ಮಾಡಿದೆ.
ಇನ್ನು ದಡದಹಳ್ಳಿ ಗ್ರಾಮದಲ್ಲಿ ತಡರಾತ್ರಿಯೇ ಸಿಡಿಲು ಬಡಿದು ಮನೆಯಲ್ಲಿ ಮಲಗಿದ್ದ ಯುವಕನ ಮೇಲೆ ಗೋಡೆ ಕುಸಿದು ಬಿದ್ದ ಚಿರನಿದ್ರೆಗೆ ಜಾರುವಂತೆ ಮಾಡಿದೆ. ಗ್ರಾಮದ ಮೂರ್ತಿ(32) ಮೃತ ದುರ್ದೈವಿಯಾಗಿದ್ದಾನೆ. ಚಾಮರಾಜನಗರ ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಲಾಗಿದೆ.

ತಾಲೂಕಿನ ಬೂದಿಪಡಗ ಸೇತುವೆ ಮುಳುಗಡೆಯಾಗಿ ಸೇತುವೆ ಮೇಲೆ 3 ಅಡಿ ನೀರು ನೀರು ಹರಿಯುತ್ತಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದೆ. ಮೊದಲೇ ಮಳೆ ಆರ್ಭಟಕ್ಕೆ ಪಾರ್ಶ್ವವಾಗಿ ಕುಸಿತ ಕಂಡಿದ್ದ ಸೇತುವೆ ಮುಳುಗಡೆ ಆಗಿರುವುದರಿಂದ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಜೊತೆಗೆ, ಸೇತುವೆ ಮೇಲೆ ವಿದ್ಯುತ್ ಕಂಬ ಕೂಡ ಬಿದ್ದಿದ್ದು ಜನರು ಸೇತುವೆ ಬಳಿ ಸುಳಿಯದೇ ಆತಂಕದಲ್ಲಿದ್ದಾರೆ‌.

ಇನ್ನು ನಿರಂತರವಾಗಿ ರಾತ್ರಿ ಸುರಿದ ಮಳೆ ಪರಿಣಾಮ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣೆ ಕೆರೆಯಂತಾಗಿದ್ದು ಪೊಲೀಸ್ ಜೀಪ್ ಗಳ ಕೆರೆಯಲ್ಲಿ ನಿಂತತ್ತೇ ಕಾಣುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆಲ್ಲಾ ನೀರು ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ, ಠಾಣೆ ಆವರಣವೂ ಸಹ ಜಲಾವೃತವಾಗಿ ಇಡೀ ಜಿಲ್ಲೆಯ ಜನತೆ ಪರದಾಡುವಂತೆ ಮಳೆರಾಯ ಆರ್ಭಟಿಸಿದ್ದಾನೆ.

Exit mobile version