Site icon PowerTV

ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಬ್ಬ ಹಿರಿಯ ನಾಯಕ ಗುಡ್‌ ಬೈ..!

ಬೆಂಗಳೂರು : ಸಾರ್ವತ್ರಿಕ‌ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಆ ಪಕ್ಷದಿಂದ ಈ ಪಕ್ಷಕ್ಕೆ, ಈ ಪಕ್ಷದಿಂದ ಆ ಪಕ್ಷಕ್ಕೆ ಹೋಗೋದು ಸಾಮಾನ್ಯ. ಆದ್ರೆ, ಕಾಂಗ್ರೆಸ್ ಪಕ್ಷಕ್ಕೆ ಘಟಾನುಘಟಿ ನಾಯಕರೇ ತೊರೆಯುತ್ತಿದ್ದಾರೆ. ಪಕ್ಷದ ನಾಯಕರ ವಿರುದ್ಧ ಸಿಡಿದೆದ್ದು ಸದ್ಯ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಸದ್ಯ ಸೈಲೆಂಟ್ ಆಗಿದ್ದಾರೆ. ನಿನ್ನೆಯಷ್ಟೇ ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ‌.

ಇದೀಗ ಮತ್ತೊಬ್ಬ ಹಿರಿಯ ನಾಯಕ ಪಕ್ಷದ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿದ ಬಳಿಕ, ಕೆಪಿಸಿಸಿ ಅಧ್ಯಕ್ಷರಿಗೆ ಒಂದೇ ಸಾಲಿನಲ್ಲಿ ರಾಜೀನಾಮೆ ಪತ್ರ ಬರೆದು ಮುದ್ದಹನುಮೇಗೌಡ, ಕಾಂಗ್ರೆಸ್‌ ಪಕ್ಷಕ್ಕೆ ಗುಡ್‌ ಬೈ ಹೇಳಿದ್ದಾರೆ.

ಮುದ್ದಹನುಮೇಗೌಡ, ಕಾಂಗ್ರೆಸ್ ನಾಯಕರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನನಗೆ ನಾಲ್ಕು ಬಾರಿ ಟಿಕೆಟ್ ತಪ್ಪಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರವನ್ನ ಬಿಟ್ಟುಕೊಟ್ಟೆ. ಇದಾದ ಬಳಿಕ ಕಾಂಗ್ರೆಸ್ ನಾಯಕರ ನಡೆ ನನಗೆ ಅಸಮಧಾನ ತಂದಿದೆ ಎಂದು ಹೇಳಿದ್ರು.

ಇನ್ನು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವ ಮುದ್ದಹನುಮೇಗೌಡ, ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಮಾತುಕತೆ ನಡೆದಿದೆ. ಈಗಾಗಲೇ ರಾಜ್ಯ ಬಿಜೆಪಿ‌ ನಾಯಕರ ಜೊತೆ ಚರ್ಚೆ ಮಾಡಿರುವ ಮುದ್ದಹನುಮೇಗೌಡಗೆ, ಕುಣಿಗಲ್ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೊಂದು ವಾರದಲ್ಲಿ ಮುದ್ದಹನುಮೇಗೌಡ ಬಿಜೆಪಿ‌ ಸೇರುವ ಸಾಧ್ಯತೆ ಇದೆ. ಅಧಿಕಾರ ಇದ್ರೆ ಆಪರೇಷನ್ ಕಮಲ ನಡೆಯುತ್ತೆ. ನನಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳುತ್ತಲೇ, ಬಿಜೆಪಿ ಪಕ್ಷಕ್ಕೆ ಸೇರುವುದಾಗಿ ಮುದ್ದುಹನುಮೇಗೌಡ ಸುಳಿವು ನೀಡಿದ್ದಾರೆ.

ಇನ್ನು ಮುದ್ದಹನುಮೇಗೌಡ್ರ ಈ‌ ನಿರ್ಧಾರ ಹಾಲಿ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್‌ಗೆ ಸಂಕಷ್ಟ ತಂದಿದೆ. ಮುಂದಿನ‌‌ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳು ವಿಭಜನೆಯಾಗುವ ಆತಂಕ ಎದುರಾಗಿದೆ ಎನ್ನಲಾಗಿದೆ. ಒಟ್ಟಾರೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಮೇಲೆ ಶಾಕ್ ಎದುರಾಗಿದೆ.

ಗೋವಿಂದ್, ಪೊಲಿಟಿಕಲ್ ಬ್ಯುರೋ ,ಪವರ್ ಟಿವಿ

Exit mobile version