Site icon PowerTV

ಮಂಗಳೂರಿಗೆ ಮೋದಿ ಭೇಟಿ ಹಿನ್ನಲೆ : ಸರ್ಕಾರಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ

ಮಂಗಳೂರು : ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ, ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸೆಪ್ಟಂಬರ್ 2ರ ಶುಕ್ರವಾರ ಮಂಗಳೂರಿನಲ್ಲಿ ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಮಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿಯೂ ಮೋದಿ ಪಾಲ್ಗೊಳ್ಳಲಿದ್ದಾರೆ.

ಸಮಾವೇಶದ ಹಿನ್ನಲೆಯಲ್ಲಿ ವಿವಿಧ ಭಾಗಗಳಿಂದ ಕೇಂದ್ರ ಸರ್ಕಾರದ ಫಲಾನುಭವಿಗಳನ್ನು ಕರೆತರಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವತಿಯಿಂದ ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ನಿಯೋಜನೆ ಮಾಡಲಾಗುತ್ತದೆ.

ಈ ಹಿನ್ನಲೆಯಲ್ಲಿ ಮಂಗಳೂರು ವಿಭಾಗ ವ್ಯಾಪ್ತಿಯ ಮಂಗಳೂರು ತಾಲೂಕು, ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡು, ಉಡುಪಿ, ಕಾರ್ಕಳ, ಬೈಂದೂರು, ಕುಂದಾಪುರ, ಭಟ್ಕಳ ವ್ಯಾಪ್ತಿಯಲ್ಲಿ ಸಂಚಾರ ನಡೆಸುವ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಜನರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದು ಕೋರಲಾಗಿದೆ.

Exit mobile version